ಮಂಡ್ಯ: ರೈತರ ಪಾಲಿನ ಧಾನ್ಯ ಲಕ್ಷ್ಮಿಯಾಗಿರುವ ಭತ್ತದಲ್ಲಿ ಸಾವಿರಾರು ತಳಿಗಳಿದ್ದು, ಆಧುನಿಕ ಭರಾಟೆಯಲ್ಲಿ ಹೊಸ ತಳಿಗಳು ಆವಿಷ್ಕಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಿಂದಿನ ಬಹುತೇಕ ತಳಿಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿವೆ. ಹೀಗಿರುವಾಗ ಭತ್ತದ ಸಾವಿರದ ಮುನ್ನೂರಕ್ಕೂ ಹೆಚ್ಚು ತಳಿಗಳನ್ನು ಸಂರಕ್ಷಿಸಿಡುವ ಮೂಲಕ ಭತ್ತದ ಸಂಗ್ರಹಾಲಯವನ್ನೇ ಸ್ಥಾಪಿಸಿ ಪ್ರಗತಿಪರ ರೈತರೊಬ್ಬರು ಗಮನಸೆಳೆದಿದ್ದಾರೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲಿನ ಪ್ರಗತಿ ಪರ ರೈತ ಸಯ್ಯದ್ ಗನಿಖಾನ್ ಈ ಸಾಧನೆ ಮಾಡಿದವರು. ಇವರ ಕಾಳಜಿಗೆ ಸಲಾಮ್ ಹೇಳಲೇ ಬೇಕಾಗುತ್ತದೆ. ಇವರು ಮನೆಯನ್ನೇ ಭತ್ತದ ಸಂಗ್ರಹಾಲಯವನ್ನಾಗಿ ಮಾಡಿ ಅಲ್ಲಿ ವಿವಿಧ ಬಗೆಯ ಭತ್ತದ ತಳಿಗಳು ಮತ್ತು ಅಕ್ಕಿಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿಟ್ಟಿದ್ದಾರೆ. ಇದು ಸುಲಭದ ಕೆಲಸವಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಇಂತಹ ಸಂಗ್ರಹಾಲಯ ಸ್ಥಾಪಿಸಿದರ ಹಿಂದೆ ಅವರ ಆಸಕ್ತಿ, ಶ್ರಮ, ಕಾಳಜಿ ಎಲ್ಲವೂ ಇರುವುದು ಗೋಚರಿಸುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಇವರು ಸಂಗ್ರಹಿಸಿಟ್ಟಿರುವ ಭತ್ತದ ತಳಿಗಳೆಲ್ಲವೂ ಅವರ ಜಮೀನಿನಲ್ಲಿಯೇ ಬೆಳೆದ ತಳಿಗಳಾಗಿವೆ.
ಹಾಗೆನೋಡಿದರೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಭತ್ತದ ತಳಿಗಳಿದ್ದು ಆ ತಳಿಗಳು ಆಯಾ ಪ್ರದೇಶಕ್ಕೆ ಹೊಂದಿಕೊಂಡು ಬೆಳೆಯುತ್ತಿರುತ್ತವೆ. ಇಂತಹ ಭತ್ತದ ತಳಿಗಳನ್ನು ಹುಡುಕಿ ತಂದು ಸಂಗ್ರಹಿಸಿಟ್ಟಿರುವ ಅವರ ಕಾರ್ಯವನ್ನು ಮೆಚ್ಚಲೇ ಬೇಕಾಗಿದೆ. ಇನ್ನು ಇವರ ಬಳಿಯಿರುವ ತಳಿಗಳಲ್ಲಿಯೂ ವೈವಿಧ್ಯತೆಯಿದೆ. ಕೆಲವು ಸುವಾಸನೆ ಬೀರುವ ಭತ್ತಗಳಾಗಿದ್ದರೆ, ಮತ್ತೆ ಕೆಲವು ಔಷಧೀಯ ಗುಣಗಳನ್ನು ಹೊಂದಿದ ಭತ್ತಗಳಾಗಿವೆ. ಅಷ್ಟೇ ಅಲ್ಲದೆ ಮೂರು, ಆರು ತಿಂಗಳಲ್ಲಿ ಕೊಯ್ಲಿಗೆ ಬರುವ ತಳಿಗಳು ಇವೆ.
ಇನ್ನು ಕೆಲವು ಭತ್ತದ ತಳಿಗಳು ವಿಟಮಿನ್, ಕ್ಯಾಲ್ಸಿಯಂ, ನಾರಿನ ಪ್ರಮಾಣ ಸೇರಿದಂತೆ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಇವುಗಳನ್ನು ರಾಜ್ಯ ಮಾತ್ರವಲ್ಲದೆ, ದೇಶದಾದ್ಯಂತ ಸುತ್ತಾಡಿ ಸಂಗ್ರಹಣೆ ಮಾಡಿರುವುದು ಮೆಚ್ಚತಕ್ಕ ವಿಷಯವಾಗಿದೆ. ಬಹಳಷ್ಟು ತಳಿಗಳು ಇವತ್ತು ಅವನತಿಯ ಹಾದಿ ಹಿಡಿದಿದೆ. ಹೀಗಾಗಿ ಇಂತಹ ತಳಿಗಳನ್ನು ಬೆಳೆಸಿ ಮುಂದಿನ ತಲೆಮಾರಿಗೆ ಸಂರಕ್ಷಿಸಿಡುವುದು ಮತ್ತು ಆಸಕ್ತಿಯುಳ್ಳ ರೈತರಿಗೆ ಭತ್ತದ ಬಗ್ಗೆ ಮಾಹಿತಿ ನೀಡುವುದು ಸಯ್ಯದ್ ಗನಿಖಾನ್ ಅವರ ಉದ್ದೇಶವಾಗಿದೆ.
ರೈತ ಸಯ್ಯದ್ ಗನಿಖಾನ್ ಅವರ ಕಾರ್ಯದ ಬಗ್ಗೆ ಅರಿತ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ರೈತನ ಮನೆಗೆ ಭೇಟಿ ನೀಡಿ ಸಂಗ್ರಹಿಸಿಟ್ಟಿರುವ ಭತ್ತದ ತಳಿಗಳನ್ನು ವೀಕ್ಷಿಸಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.