ಚಾಮರಾಜನಗರ: ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಒಂದೆಡೆ ಬೆಟ್ಟಿಂಗ್ ನಡೆದಿದ್ದರೆ ಮತ್ತೊಂದೆಡೆ ಸ್ವತಃ ಅಭ್ಯರ್ಥಿಗಳೇ ದೇವರಿಗೆ ಹರಕೆ ಹೊತ್ತಿದ್ದರು. ಇದೀಗ ಹೀಗೆ ಹರಕೆ ಹೊತ್ತಿದ್ದ ಅಭ್ಯರ್ಥಿಯೊಬ್ಬರು ಹರಕೆ ತೀರಿಸಲು 160 ಕಿ.ಮೀ. ಕಾಲ್ನಡಿಗೆಯಲ್ಲಿ ಹೊರಟಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯ ನಾಲ್ಕನೇ ವಾರ್ಡ್ನಿಂದ ಸ್ಪರ್ಧಿಸಿ ಗೆಲುವು ಪಡೆದ ಸೆಲ್ವಂ ಎಂಬುವರೇ ಹರಕೆ ತೀರಿಸಲು ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿರುವ ಡೋರನಹಳ್ಳಿಯ ಸಂತ ಆಂತೋಣಿ ಚರ್ಚ್ಗೆ ಪಾದಯಾತ್ರೆ ಹೊರಟವರಾಗಿದ್ದಾರೆ.
ಇವರು ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನಾನು ಗೆದ್ದರೆ ಡೋರನಹಳ್ಳಿಯ ಅಂತೋಣಿ ಚರ್ಚ್ಗೆ ಪಾದಯಾತ್ರೆಯಲ್ಲಿ ತೆರಳಿ ಹರಕೆ ಸಲ್ಲಿಸುವುದಾಗಿ ಹರಕೆ ಮಾಡಿಕೊಂಡಿದ್ದರು. ಅವರು ಈಗ ಚುನಾವಣೆಯಲ್ಲಿ ಗೆಲುವು ಪಡೆದ ಹಿನ್ನಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ.
ಸೆಲ್ವಂ ಅವರು ತಾವು ಸ್ಪರ್ಧಿಸಿದ್ದ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡ್ನಿಂದಲೇ ಸಂತ ಆಂತೋಣಿಯವರಿಗೆ ಹರಕೆ ತೀರಿಸಲು ಸುಮಾರು 160 ಕಿಲೋ ಮೀಟರ್ ದೂರಲ್ಲಿರುವ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಡೋರನಹಳ್ಳಿಗೆ ಸಂತಸದಿಂದಲೇ ಪಾದಯಾತ್ರೆ ಮಾಡುತ್ತಿದ್ದು, ಸಂತ ಆಂತೋಣಿಯವರು ನಂಬಿದ ಭಕ್ತರಿಗೆ ಕೈ ಬಿಡುವುದಿಲ್ಲ ಎನ್ನುವುದಕ್ಕೆ ತಾನು ಗೆಲುವು ಸಾಧಿಸಿರೋದೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.