ಕೊಪ್ಪಳ: ದೇಶದ ಮೊಟ್ಟ ಮೊದಲ ಆಟಿಕೆ ಉತ್ಪಾದನಾ ಘಟಕಕ್ಕೆ ಕೊಪ್ಪಳದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತವಾಗಿ ಚಾಲನೆ ಕೊಟ್ಟರು. ಇದು ಆತ್ಮನಿರ್ಭರ ಭಾರತ ಅಭಿಯಾನದಡಿ ವೋಕಲ್ ಫಾರ್ ಲೋಕಲ್ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಪೂರಕವಾಗಿ ಆಯೋಜಿಸಿದ ಯೋಜನೆಯಾಗಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬಾನಾಪುರದಲ್ಲಿ ಏಕಾಸ್ ಕಂಪನಿ ಇದನ್ನು ನಿರ್ಮಿಸುತ್ತಿದೆ.
5 ಸಾವಿರ ಕೋಟಿ ವೆಚ್ಚದ, 400 ಎಕರೆ ಜಮೀನಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಆಟಿಕೆ ಉತ್ಪಾದನ ಘಟಕ ತಲೆಎತ್ತಲಿದ್ದು , ಈ ಕ್ಲಸ್ಟರ್ನಿಂದ 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಆಟಿಕೆ ತಯಾರಿಕೆ ಮೂಲಕ ಆರ್ಥಿಕ ಚಟುವಟಿಕೆ ಹೆಚ್ಚಿಸುವ ಜತೆಗೆ ಉದ್ಯೋಗ ಸೃಷ್ಟಿಗೆ ಬಲ ತುಂಬಲು ಇದರಿಂದ ಸಹಕಾರಿಯಾಗಲಿದೆ. ಇಲ್ಲಿ ದೇಶ-ವಿದೇಶಗಳ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.
ಇಂತಹ ಯೋಜನೆಗೆ ಚಾಲನೆ ನೀಡಲು, ಸಿಎಂ ಬಿಎಸ್ವೈ , ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಬಸವರಾಜರಾಯರೆಡ್ಡಿ, ಶಾಸಕ ಆಚಾರ್ ಹಾಲಪ್ಪ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿತು.
ಕರ್ನಾಟಕವನ್ನು ಭಾರತದ ಆಟಿಕೆ ಉತ್ಪಾದನಾ ಕೇಂದ್ರವಾಗಿಸಲು ಮತ್ತು ಆಟಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ರಾಜ್ಯ ಸರ್ಕಾರದ ಪ್ರಯತ್ನದ ಭಾಗವಾಗಿ, ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ (ಪಿಎಸ್ಐಸಿಡಿ) ಕಾರ್ಯಕ್ರಮದ ಯೋಜನೆ ಇದಾಗಿದೆ.