ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿ ಕುಪ್ಪಳ್ಳಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಬಡ ರೈತನ ಹಸುವನ್ನು ತಿಂದು ಹಾಕಿದ್ದ ಚಿರತೆಯನ್ನು ಹಿಡಿಯುವಂತೆ ಕುಪ್ಪಳ್ಳಿ ಗ್ರಾಮದ ಜನರು ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರ ಪರಿಣಾಮ ಚಿರತೆ ಆಹಾರ ಹುಡುಕಿ ಗ್ರಾಮದೊಳಗೆ ಅಡ್ಡಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಸೋಮವಾರ ರಾತ್ರಿ ಗ್ರಾಮದ ಲವಕುಮಾರ್ ಎಂಬುವರ ಮನೆಯ ಸುತ್ತ ಚಿರತೆಯು ಸಂಚರಿಸುತ್ತಿರುವ ದೃಶ್ಯ ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮತ್ತಷ್ಟು ಗ್ರಾಮದ ಜನರಿಗೆ ಭಯ ಆವರಿಸುವಂತೆ ಮಾಡಿದೆ. ಸಾರ್ವಜನಿಕರು ರಾತ್ರಿ ವೇಳೆ ತಮ್ಮ ಜಮೀನುಗಳ ಬಳಿ ಕೃಷಿ ಚಟುವಟಿಕೆಗಳಿಗೆ ತೆರಳುವುದು ಕಷ್ಟಕರವಾಗಿದೆ. ಇದರಿಂದಾಗಿ ಕುಪ್ಪಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯಲು ಎರಡರಿಂದ ಮೂರು ಕಡೆಗಳಲ್ಲಿ ಬೋನ್ಗಳನ್ನು ಅಳವಡಿಸಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅರಣ್ಯ ಇಲಾಖೆಯೇ ಕಾರಣವಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.