ದಾವಣಗೆರೆ: ಇತ್ತೀಚೆಗೆ ಮದುವೆಯಾಗಿದ್ದ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿಯವರ ಸಹೋದರನ ಮಗ ದಾವಣಗೆರೆ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಲಾಕ್ಡೌನ್ ನಡುವೆಯೇ ಭರ್ಜರಿ ಎಣ್ಣೆ ಪಾರ್ಟಿ ಕೊಟ್ಟಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಸರ್ಕಾರಿ ಕಟ್ಟಡದಲ್ಲಿ ಪಾರ್ಟಿ ಮಾಡಿರುವ ಆರೋಪ ಇವರ ಮೇಲಿದೆ. ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಹಾಡಹಗಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ನಿಖಿಲ್ ಮತ್ತು ಆತನ ಸ್ನೇಹಿತ, ಸ್ನೇಹಿತೆಯರು ಸಿಕ್ಕಿಬಿದ್ದಿದ್ದಾರೆ.
ಮಹಿಳೆಯರೂ ಭಾಗಿಯಾಗಿದ್ದ ಈ ಎಣ್ಣೆ ಪಾರ್ಟಿಯ ವಿರುದ್ಧ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಲಾಕ್ಡೌನ್ ಸಂಕಷ್ಟದಲ್ಲಿ ಶ್ರೀಮಂತರ ಮಕ್ಕಳ ಮೋಜಿನಾಟ ನಡೆಯುತ್ತಿದ್ದರೂ ಅದನ್ನು ಕೇಳುವವರು ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಮಾತ್ರವಲ್ಲದೇ ದೇಶದ ಹಲವು ಸ್ಕೌಟ್ ಮತ್ತು ಗೈಡ್ ಶಿಬಿರ ನಡೆದ ಸ್ಥಳ ಇದಾಗಿದ್ದು, ಕೆರೆ ಪಕ್ಕದಲ್ಲಿ ಇದೆ. ಕೇಂದ್ರದ ಮಾಜಿ ಸಚಿವ ಕೊಂಡಜ್ಜಿ ಬಸಪ್ಪನವರ ಸಮಾಧಿ ಸ್ಥಳದ ಬಳಿ ಈ ಪಾರ್ಟಿ ನಡೆದಿದೆ. ಈ ಕುರಿತು ಸ್ಥಳೀಯರು ವಿಡಿಯೋ ಮಾಡಿದ್ದು ಅದರಲ್ಲಿ ನಿಖಿಲ್ ಕೊಂಡಜ್ಜಿ ಸೆರೆಯಾಗಿದ್ದಾರೆ.
ಸ್ಥಳೀಯ ಯುವಕರಿಂದ ಸರ್ಕಾರಿ ಕಟ್ಟಡದಲ್ಲಿ ನಡೆದ ಪಾರ್ಟಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರನ್ನೇ ಗದರಿಸಿದ್ದ ನಿಖಿಲ್ ಮತ್ತು ಸ್ನೇಹಿತರು ಯಾರನ್ನು ಕರೆಸುತ್ತೀಯೋ ಕರೆಸೋ ಎಂದು ಹೇಳಿದ್ದರು ಎನ್ನಲಾಗಿದೆ. ಈ ಕುರಿತು ಸ್ಥಳೀಯರು ದೂರು ದಾಖಲು ಮಾಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.
ವಿಚಿತ್ರ ಏನೆಂದರೆ ಯಾರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ, ಎಫ್ಐಆರ್ ಕೂಡ ದಾಖಲಾಗಿಲ್ಲ ಎನ್ನಲಾಗಿದೆ. ಅವರಿಗೆ ಬುದ್ಧಿವಾದ ಹೇಳಿದ್ದೇವೆ ಎಂದಷ್ಟೇ ಪೊಲೀಸರು ಹೇಳಿದ್ದು, ಉಳಿದವರಿಗಾದರೆ ಡಿಸಾಸ್ಟರ್ ಮ್ಯಾನೇಜ್ಮೆಂಟ್, ಎಪಿಡೆಮಿಕ್ ಕಾಯ್ದೆ ಬಳಕೆ ಮಾಡಲಾಗುತ್ತಿತ್ತು, ಇವರ ವಿರುದ್ಧ ಏಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.