NewsKarnataka
Saturday, October 23 2021

ಮೈಸೂರು

ದೇಶದ ಏಕೈಕ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆವಿ ಸಂಪತ್‌ ನಿಧನ

ಮೈಸೂರು: ರಾಷ್ಟ್ರದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್(64) ಅವರ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕಡಿಮೆ ಓದುಗರ ಬಳಗ, ಆರ್ಥಿಕವಾಗಿ ಸಾಕಷ್ಟು ತೊಂದರೆಗಳಿದ್ದರೂ ಯಾವುದನ್ನು ಲೆಕ್ಕಿಸದೆ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತವನ್ನು ಸುಧರ್ಮ ಪತ್ರಿಕೆಯ ಮೂಲಕ ಜನರಿಗೆ ಪರಿಚಯಿಸುವ ಮಹತ್ತರ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದ ಸಂಪತ್ ಕುಮಾರ್ ಅವರ ಸೇವೆ ಅನನ್ಯ ಎಂದು ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ.
ಮೈಸೂರಿನ ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿದ್ದ ಇವರು 1945ರಲ್ಲಿ ಸುಧರ್ಮ ಮುದ್ರಣಾಲಯ ಪ್ರಾರಂಭಿಸಿ ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುತ್ತಿದ್ದರು. 1963 ರಲ್ಲಿ ಅವರು ಮೈಸೂರು ನಗರದಲ್ಲಿ ಬಾಲಕಿಯರ ಶಾಲೆ ಪ್ರಾರಂಭಿಸಿ ಅಲ್ಲಿ ಸಂಸ್ಕೃತ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದರು.
1970ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಮತ್ತು ಅದನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸುಧರ್ಮ ಪತ್ರಿಕೆ ಪ್ರಾರಂಭಿಸಿದರು. ವರದರಾಜ ಅಯ್ಯಂಗಾರ್ ನಿಧನದ ನಂತರ ಸಂಪಾದಕ ಹುದ್ದೆ ವಹಿಸಿಕೊಂಡ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮೀ ಅವರು ಪತ್ರಿಕೆಯನ್ನು ಈವರೆಗೆ ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದರು. ಇಂದಿನ ಆಧುನಿಕತೆಯನ್ನು ಬಳಸಿಕೊಂಡು ಪತ್ರಿಕೆಯ ಆನ್ ಲೈನ್ ಆವೃತ್ತಿಯನ್ನು ಸಹ ತಂದಿದ್ದಾರೆ. ಸಂಪತ್ ಕುಮಾರ್ ತಮ್ಮ ತಂದೆಯ ಇಚ್ಚೆಯಂತೆ ಸಂಸ್ಕೃತ ಭಾಷೆಯನ್ನು ಪಸರಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬಂದಿದ್ದರು.
ಇವರು ಸಂಸ್ಕೃತದ ಹಲವು ಮೊಟ್ಟ ಮೊದಲುಗಳನ್ನು ನಿರ್ಮಿಸಿದ್ದಾರೆ. ಮೊದಲ ಸಂಸ್ಕೃತ ದಿನದರ್ಶಿ ತರುವ ಜೊತೆಗೆ ಸುಧರ್ಮ ಎ3 ಗಾತ್ರದ ಎರಡು-ಪುಟ, ಐದು-ಕಾಲಂ ಪತ್ರಿಕೆಯಾಗಿಸಿದ್ದರು. 2009 ರಲ್ಲಿ ಸುಧರ್ಮ ಇ-ಪೇಪರ್ ಆವೃತ್ತಿ ಪ್ರಾರಂಭಿಸಿ ಜಗತ್ತಿನಾದ್ಯಂತ ಹಲವಾರು ಜನರು ಸಂಸ್ಕೃತ ಪತ್ರಿಕೆಯನ್ನು ಓದುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ನಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚಂದಾದಾರರನ್ನು ಹೊಂದಿದ್ದು ಅಂಚೆ ಮೂಲಕ ಪತ್ರಿಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಸಂಪತ್ ಕುಮಾರ್ ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಹೇಳಿದ್ದರು. ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸೇವೆಯನ್ನು ಪರಿಗಣಿಸಿ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೆ.ವಿ.ಸಂಪತ್ ಕುಮಾರ್- ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದೆ. ಆದರೆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ವಿಧಿವಶರಾದದ್ದು ಬೇಸರದ ವಿಷಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!