NewsKarnataka
Saturday, July 31 2021

ಕರ್ನಾಟಕ

ಮತ್ತೆ ಬೆಟ್ಟ ಕುಸಿಯುವ ಭೀತಿ- ಏಳು ಕುಟುಂಬಗಳ ಸ್ಥಳಾಂತರಕ್ಕೆ ಗ್ರಾಮ ಪಂಚಾಯ್ತಿ ನೋಟಿಸ್

 

ಮಡಿಕೇರಿ ಜುಲೈ 22 : ಗುಡ್ಡಗಾಡು ಜಿಲ್ಲೆ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಜನತೆಗೆ ಅತಂಕ ಶುರುವಾಗುತ್ತದೆ. ಅದರಲ್ಲೂ ಗುಡ್ಡ ಪ್ರದೇಶಗಳಲ್ಲಿ ಮನೆ ನಿರ್ಮಿಸಿರುವವರಿಗೆ ಆಗಸ್ಟ್‌ ತಿಂಗಳು ಎಂದರೆ ಕಳೆದ ಮೂರು ವರ್ಷಗಳಿಂದಲೂ ದುಸ್ವಪ್ನ ಕಂಡಂತೆ ಭಾಸವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಆಗಸ್ಟ್‌ ತಿಂಗಳಿನಲ್ಲಿ ಕೊಡಗಿನಲ್ಲಿ ಉಂಟಾಗಿರುವ ಭೂಕುಸಿತವೇ ಇದಕ್ಕೆ ಕಾರಣವಾಗಿದ್ದು ಈ ಬಾರಿ ಜುಲೈ ತಿಂಗಳಿನಲ್ಲೇ ಮಳೆ ಜೋರಾಗಿರುವುದರಿಂದ ಗುಡ್ಡ ಪ್ರದೇಶಗ: ಜನತೆ ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಮಳೆಯ ಅರ್ಭಟ ಮುಂದುವರೆದಿದ್ದು ಕಳೆದ 48 ಘಂಟೆಗಳಿಂದ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಮಡಿಕೇರಿ ತಾಲ್ಲೂಕಿನ ಮಕ್ಕಂದೂರು ಗ್ರಾಮದ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ 7 ಕುಟುಂಬಗಳವರಿಗೆ ಸ್ಥಳಾಂತರಗೊಳ್ಳುವಂತೆ ಮಕ್ಕಂದೂರು ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ.
2018ರಲ್ಲಿ ಮಾದಾಪುರ-ಮಡಿಕೇರಿ ನಡುವಿನ ಮಕ್ಕಂದೂರುವಿನ ಬಾಲಾಜಿ ತೋಟದ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಮನೆಗಳು ಸಂಪೂರ್ಣ ನೆಲಕಚ್ಚಿ, ಪ್ರಾಣಿಗಳು ಸಾವನ್ನಪ್ಪಿದ್ದವು. ಇದೀಗ ಅಂದು ಗುಡ್ಡ ಕುಸಿದ ಸ್ಥಳದಲ್ಲಿಯೇ ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಮಕ್ಕಂದೂರು ಸುತ್ತಲಿನ ಪ್ರದೇಶವಾದ ಉದಯಗಿರಿ, ಮೇಘಾತಾಳು, ತಂತಿಪಾಲ ಹಾಗೂ ಹುಲಿತಾಳ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ನಷ್ಟ ಅನುಭವಿಸಿದ ಜನರಿಗೆ ಮತ್ತೆ ಇಲ್ಲಿನ ಉದಯಗಿರಿ ಬೆಟ್ಟ ಕುಸಿಯುವ ಅತಂಕ ಮನೆ ಮಾಡಿದೆ. ವಾರದಿಂದ ಅಗುತ್ತಿರುವ ಮಳೆಯಿಂದ ಈಗಾಗಲೇ ಬೆಟ್ಟ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಅರಂಭವಾಗಿದೆ. ಹೀಗಾಗಿ ಈ ಬೆಟ್ಟದ ಕೆಳಭಾಗದಲ್ಲಿ ವಾಸ ಮಾಡುವ 7 ಕುಟುಂಬಗಳ ಮನೆಗೆಗಳಲ್ಲಿ ಆತಂಕ ಮನೆ ಮಾಡಿದೆ.
ಈ ಪ್ರದೇಶದಲ್ಲಿ ವಾಸ ಮಾಡುವ ಜನರು ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಸುತ್ತಲೂ ಬೆಟ್ಟ ಇರುವ ಹಿನ್ನಲೆಯಲ್ಲಿ 2018 ರಲ್ಲೂ ಪಕ್ಕದ ಬೆಟ್ಟ ಕುಸಿದಿದ್ದು, ಬಾಬು ಎಂಬುವರು ಇದೇ ಬೆಟ್ಟಸ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು. 2018ರಲ್ಲಿ ಬೆಟ್ಟ ಕುಸಿದು ಈ ಭಾಗದ ಮನೆಗಳ ಬಳಿ ಕೃತಕವಾಗಿ ಕೆರೆ ನಿರ್ಮಾಣವಾಗಿದೆ. ಹೀಗಾಗಿ ಬೆಟ್ಟದಲ್ಲಿ ತೇವಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಮಳೆ ಮುಂದುವರಿದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ತಕ್ಷಣ ಸ್ಥಳಾಂತರಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಸೂಕ್ಷ್ಮತೆಗಳನ್ನು ಪರಿಶೀಲನೆ ಮಾಡಿದ ಮಕ್ಕಂದೂರು ಗ್ರಾಮ ಪಂಚಾಯತಿಯು ಈಗಾಗಲೇ ಏಳು ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾನವಿ ಮಾಡಿದೆ.
ಈ ಹಿಂದೆ ಮಡಿಕೇರಿ ಸಮೀಪವೂ ಮಂಗಳೂರು ಹೆದ್ದಾರಿಯಲ್ಲಿ ಜಿಲ್ಲಾಡಳಿತ 6 ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ ನೀಡಿತ್ತು. ಇಲ್ಲಿ ಭೂ ಕುಸಿತದ ಭೀತಿ ಜಿಲ್ಲಾದಿಕಾರಿಗಳ ಕಚೇರಿಯನ್ನೂ ಬಿಟ್ಟಿಲ್ಲ. ಅಲ್ಲಿಯೂ ಕೂಡ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಭೂ ಕುಸಿತಕ್ಕೆ ಕಾರಣವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಕಳೆದ ಮೂರು ತಿಂಗಳ ಮುಂಚೆಯೇ ಮಣ್ಣು ಕುಸಿತವಾಗದಂತೆ ತಡೆಗೋಡೆಯನ್ನೂ ನಿರ್ಮಿಸಿರುವುದರಿಂದ ಕೊಂಚ ನಿರಾಳವಾಗಿದೆ. ಆದರೆ ವಿಪರೀತ ಮಳೆ ಆದರೆ ಕುಸಿಯುವ ಭಿತಿ ಇಲ್ಲದ ಗುಡ್ಡಗಳೂ ಕುಸಿಯುವ ಸಾದ್ಯತೆ ಇದ್ದೇ ಇದೆ.

 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.