ಬೆಳಗಾವಿ,ಡಿ.21 : ಮತಾಂತರ ನಿಷೇಧ ವಿಧೇಯಕವನ್ನು ನಾವು ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ. ಇದು ಸಂವಿಧಾನದ ವಿರುದ್ಧವಾಗಿದೆ ಎಂದು ಕೆಸಿಸಿಪಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸಲು ರಾಜಕೀಯವಾಗಿ ಕೆಲವು ವಿಷಯಗಳನ್ನು ವಿಷಯಾಂತರ ಮಾಡಲಾಗುತ್ತಿದೆ. ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್‍ರವರು ಮಾಡಿದ ಸಂವಿಧಾನಕ್ಕೂ ಈ ತೀರ್ಮಾನ ಅನ್ವಯಿಸುವುದಿಲ್ಲ. ಬೇರೆ ಬೇರೆಯವರು ಬಂದು ಹರೇ ರಾಮ ಹರೇ ಕೃಷ್ಣ ಎಂದು ಭಜನೆ ಮಾಡುತ್ತಾರೆ ಎಂದು ಟೀಕಿಸಿದರು.
ನಮ್ಮದು ಜಾತ್ಯಾತೀತ ದೇಶ, ಶಾಂತಿಯ ತೋಟ, ಅಪಾರವಾದ ಪ್ರೀತಿ-ವಿಶ್ವಾಸವಿದೆ. ಇಲ್ಲಿ ಶಾಂತಿಯನ್ನು ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿಂದೆ ಮೊಘಲರು, ಪರ್ಶಿಯನ್ನರು ಆಡಳಿತ ನಡೆಸಿದ್ದರು. ಎಲ್ಲಿ ಜಾಸ್ತಿಯಾಗಿದೆ? ಎಲ್ಲರಿಗೂ ಸೆಂಟ್ ಜೋಸೇಫ್, ಸೆಂಟ್ ಮಾರ್ಥಾಸ್, ಕ್ರೈಸ್ಟ್ ಬೇಕು, ಎಲ್ಲರ ಮಕ್ಕಳಿಗೂ ಕಾನ್ವೆಂಟ್ ಬೇಕು, ನಾನು ಕೂಡ ಕ್ರೈಸ್ಟ್ ಸ್ಕೂಲ್‍ನಲ್ಲೇ ಓದಿದ್ದೇನೆ. ಯಾವತ್ತೂ ಅವರ ಧರ್ಮದ ಬಗ್ಗೆ ಬೋಧಿಸಿಲ್ಲ. ಬಲವಂತವನ್ನು ಮಾಡಿಲ್ಲ ಎಂದು ಹೇಳಿದರು.
ಸುಮ್ಮನೆ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸವಾಗುತ್ತಿದೆ. ಅವರು ಸೇವೆ ಮಾಡುತ್ತಿದ್ದಾರೆ. ಇಷ್ಟು ವರ್ಷ ಮಾಡದ ಬಲವಂತದ ಮತಾಂತರ ಹೀಗೇಕೆ? ಈ ವಿಧೇಯಕ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಲಿದೆ. ಬ್ರಿಟಿಷರು, ಮೊಘಲರು ಆಳಿದರೂ ಮತಾಂತರ ಎಲ್ಲಿ ಹೆಚ್ಚಾಗಿದೆ ಎಂದು ಪ್ರಶ್ನಿಸಿದರು.
ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ಪುಂಡರ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರ್ಯಾರೋ ತಲೆಕೆಟ್ಟವರು ಮಾತನಾಡುತ್ತಾರೋ, ಯಾರೋ ಮಾಡಿದ ತಕ್ಷಣ ಬಿಜೆಪಿಯವರು ಮಾಡಿದೆ ಎಂದು ಹೇಳಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಳ ಬುದ್ದಿವಂತರು, ಶಕ್ತಿವಂತರು, ದೊಡ್ಡವರು ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.