ಹುಬ್ಬಳ್ಳಿ: ಇಲ್ಲಿನ ಆದರ್ಶ ನಗರದ ಜಿ.ವಿ. ಜೋಶಿ ರೋಟರಿ ಶಾಲೆಯ ಒಬ್ಬ ವಿದ್ಯಾರ್ಥಿಗೆ ಬುಧವಾರ ಕೋವಿಡ್ ದೃಢಪಟ್ಟಿದ್ದು, ಡಿ. 5ರ ವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ.
ಇತ್ತೀಚೆಗೆ ಎಸ್‌ಡಿಎಂ ಕಾಲೇಜಿನ ಹಲವು ವಿದ್ಯಾರ್ಥಿಗಳಿಗೆ ಕೋವಿಡ್ ಆಗಿತ್ತು. ಜೋಶಿ ಶಾಲೆಯ ವಿದ್ಯಾರ್ಥಿ ಅಲ್ಲಿನವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು.
‘ಜೋಶಿ ಶಾಲೆಯ ಒಬ್ಬ ವಿದ್ಯಾರ್ಥಿಗೆ ಕೋವಿಡ್ ದೃಢವಾಗಿದ್ದು, ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಶಿಕ್ಷಕರು ಹಾಗೂ ಸಿಬ್ಬಂದಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ ಮಾಹಿತಿ ನೀಡಬೇಕು. ಪಡೆದಿಲ್ಲವಾದರೆ ತಕ್ಷಣವೇ ಲಸಿಕೆ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದರು.
ಆ ಶಾಲೆಯ ಎಲ್ಲ ಸಿಬ್ಬಂದಿ ಹಾಗೂ ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಡಳಿತ ಮಂಡಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.