ಹುಬ್ಬಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಕ್ಕೂಟ ವ್ಯವಸ್ಥೆಗೆ ಅದರದೇ ಆದ ಗೌರವವಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಈ ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದ ಗಡಿಭಾಗದ ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿರೋದು ಆತಂಕಕಾರಿ ಬೆಳವಣಿಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಇಷ್ಟೆಲ್ಲ ಬೆಳವಣಿಗೆ ಆದರೂ ಸಹಿತ ರಾಜ್ಯ ಸರ್ಕಾರ ಸುಮ್ಮನೆ ಇರೋದು ನೋಡಿದ್ರೆ ಸರ್ಕಾರ ಸತ್ತು ಹೋಗಿದೆ ಅನಿಸುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ದಕ್ಕೆ ತರಲು ಮುಂದಾಗುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ವಿಸರ್ಜನೆ ಮಾಡಬೇಕೆಂದು. 1966 ರಲ್ಲಿಯೇ ಗಡಿ ವಿಷಯದಲ್ಲಿ ಮಹಾಜನ್ ಆಯೋಗವನ್ನು ನಮ್ಮ ರಾಜ್ಯ ಒಪ್ಪಿಕೊಂಡಿದೆ. ಆದರೆ ಮಹಾರಾಷ್ಟ್ರದವರು ಮಾತ್ರ ಮೇಲಿಂದಮೇಲೆ ಗಡಿಯಲ್ಲಿ ಖ್ಯಾತೆ ತೆಗೆಯುತ್ತಲೇ ಬಂದಿದೆ. ಇದೀಗ ಮತ್ತೇ ಕರ್ನಾಟಕದ 866 ಹಳ್ಳಿಗಳನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಿದೆ. ಇದಕ್ಕೆ ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯನ್ನು ಜಾರಿಗೆ ಘೋಷಣೆ ಮಾಡಿದ್ದಾರೆ. ಇಷ್ಟೇಲ್ಲಾ ಬೆಳವಣಿಗೆ ಆಗುತ್ತಿದ್ದರೂ ಕೂಡಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಮ್ಮನೆ ಇದ್ದು, ರಾಜ್ಯದ ಮುಖ್ಯಮಂತ್ರಿಗಳು ಮೌನವಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆಯಾ? ಎಂದು ಪ್ರಶ್ನೆ ಮಾಡಿದರು.
ಮಹಾರಾಷ್ಟ್ರದಲ್ಲಿಯೂ ಕನ್ನಡಿಗರು ಇದ್ದಾರೆ. ಅವರು ನಮ್ಮ ರಾಜ್ಯಕ್ಕೆ ಬರ್ತಿನಿ ಅಂದಿದ್ದಾರೆ. ಆದರೆ ನಾವು ಮಹಾರಾಷ್ಟ್ರದಲ್ಲಿ ಹೋಗಿ ಕಾರ್ಯಕ್ರಮ ಮಾಡಲು ಆಗುತ್ತಾ ಎಂದ ಅವರು, ಇದು ಒಕ್ಕೂಟದ ವ್ಯವಸ್ಥೆ ಲಕ್ಷಣವಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್, ಮುಖಂಡರಾದ ಅನಿಲಕುಮಾರ ಪಾಟೀಲ್, ಅಲ್ತಾಫ್ ಹಳ್ಳೂರು, ಮಾಜಿ ಶಾಸಕ ಎನ್.ಹೆಚ್.ಕೊನರೆಡ್ಡಿ, ಕೆ.ಎನ್.ಗಡ್ಡಿ, ಸದಾನಂದ ಡಂಗನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.