ಹುಬ್ಬಳ್ಳಿ : ರಾಹುಲ್ ಗಾಂಧಿ ಅವರು ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದಿದ್ದೂ, ನಾನು ಮಾಹಿತಿ ನೀಡಿದ್ದೇನೆ . ನನ್ನ ಚಲನವಲನ ಗಮನಿಸಲು ನಾಗಪುರದಿಂದ ತಂಡ ಬಂದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೆ ನನ್ನ ಚಲನವಲನ ಗಮನಿಸುವುದರೊಳಗಾಗಿ ಚುನಾವಣೆಯೇ ಮುಗಿದಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಪುರದಲ್ಲಿ ಅಷ್ಟೊಂದು ಎಕ್ಸಪರ್ಟ್ ತಂಡಗಳು ಇದ್ದಲ್ಲಿ ಇತ್ತೀಚೆಗೆ ಅಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಏಕೆ ಸೋಲನ್ನು ಅನುಭವಿಸುತ್ತಿತ್ತು ಎಂದು ಪ್ರಶ್ನಿಸಿದರು.
ಚುನಾವಣೆ ಎಂದ ಮೇಲೆ ನೆಗೆಟೀವ್ ಹಾಗೂ ಪಾಸಿಟೀವ್ ಅಭಿಪ್ರಾಯಗಳು ಬಂದೆ ಬರುತ್ತವೆ. ನನ್ನ ಬಗ್ಗೆಯೂ ಇದೀಗ ನೆಗೆಟೀವ್ ಅಭಿಪ್ರಾಯಗಳು ಬಂದಿವೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಹಲವು ನೆಗೇಟಿವ್ ಅಭಿಪ್ರಾಯಗಳನ್ನು ನಾನು ಎದುರಿಸಿದ್ದೇನೆ. ಸೆಂಟ್ರಲ್ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಎಲ್ಲ ಸ್ಥಾನಮಾನ ನೀಡಿದೆ. ಈ ಬಾರೀ ಚುನಾವಣೆಯಲ್ಲಿ ಐವತ್ತು ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಾರೆ. ಹಾನಗಲ್ ನಲ್ಲಿ ಅವರು ಪ್ರಚಾರ ಮಾಡಲಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲೂ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ನನಗೂ ಪ್ರಚಾರಕ್ಕಾಗಿ ಕರೆಯುತ್ತಿದ್ದಾರೆ ಎಂದರು.