ವಿಜಯಪುರ: ಜಾತಿ ಜನಗಣತಿ ರೆಡಿನೇ ಇಲ್ಲ. ಜಾತಿ ಜನಗಣತಿ ಕುರಿತು ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಜನಗಣತಿ ತಾವು ಸಿಎಂ ಇದ್ದಾಗ ಬಿಡುಗಡೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿಕೊಂಡು ಬಂದಿದ್ದರು. ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಅವರ ಜೊತೆ ಬೆಂಬಲ ವಾಪಸ್ ಪಡೆಯಬೇಕಿತ್ತು. ಜಾತಿ ಜನಗಣತಿ ವಿಚಾರವಾಗಿ ಹೋರಾಟ ಮಾಡುತ್ತೇವೆ ಎಂದವರು. ವಿಧಾನ ಮಂಡಲದಲ್ಲಿ ಈ ಕುರಿತು ಮಾತನಾಡಲೇ ಇಲ್ಲ, ಆಗ ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ ? ಎಂದರು.
ಸಿಂದಗಿ ಉಪ ಚುನಾವಣೆಗೆ ಸಚಿವೆ ಶಶಿಕಲಾ ಜೊಲ್ಲೆ ಜಿಲ್ಲೆಗೆ ಬಂದೇ ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಂದಗಿ ಉಪ ಚುನಾವಣೆಯಲ್ಲಿ ಯಾರಿಂದಲೂ ಏನೂ ಪರಿಣಾಮ ಬೀರಲ್ಲ. ಪಕ್ಷದಲ್ಲಿ ಬೂತ ಮಟ್ಟದ ಕಾರ್ಯಕರ್ತರ ಸಂಘಟನೆ ಇದೆ. ಎಲ್ಲ ಚುನಾವಣೆ ನಾವು ಗೆಲ್ಲುತ್ತ ಬಂದಿದ್ದೇವೆ. ಗ್ರಾಮ ಪಂಚಾಯಿತಿ ಹಿಡಿದು ಲೋಕಸಭೆ ಚುನಾವಣೆ ವರೆಗೂ ಗೆಲ್ಲುತ್ತ ಬಂದಿದ್ದೇವೆ ಎಂದರು.
ಪಕ್ಷದ ಸಿದ್ದಾಂತ, ಕಾರ್ಯಕರ್ತರ ಶಕ್ತಿ ಹಾಗೂ ನಾಯಕತ್ವದ ಆಧಾರದ ಮೇಲೆ ಚುನಾವಣೆ ಗೆಲ್ಲುತ್ತ ಬಂದಿದ್ದೇವೆ. ಹಾಗೆ ಈ ಬಾರಿಯ ಚುನಾವಣೆ ಸಹಿತ ಗೆಲ್ಲುತ್ತೇವೆ ಎಂದರು.