News Kannada
Thursday, September 28 2023
ಬೆಂಗಳೂರು

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲ ಎಂದ ಡಿ.ಕೆ. ಶಿವಕುಮಾರ್

Shivakumar: I took Bommai's advice on development issues
Photo Credit : Facebook

ಬೆಂಗಳೂರು: ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲ. ಸರ್ಕಾರವೇ ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡಿದೆ. ಆ ಮೂಲಕ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ  ಮಾತನಾಡಿದ ಅವರು ನಮಗೆ ಇದರಲ್ಲಿ ರಾಜಕಾರಣ ಬೇಕಿಲ್ಲ. ನಾವು ಸರ್ಕಾರದ ಕ್ರಮಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ತನ್ನ ಕೆಲಸ ಮಾಡಲಿ. ಆದರೆ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ನಾವು ಜನರ ಭಾವನೆಗೆ ಗೌರವ ನೀಡುತ್ತೇವೆ. ಜನರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ.

ಜನರ ಆಕ್ರೋಶ ಮೊದಲಿನಿಂದಲೇ ಇತ್ತು. ಆದರೆ ಸರ್ಕಾರ ಆರಂಭದಿಂದಲೇ ಪರಿಸ್ಥಿತಿ ನಿಯಂತ್ರಣ ಮಾಡಿದ್ದರೆ ಈ ದುಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಸರ್ಕಾರ ಯಾವುದೇ ತನಿಖೆ ಮಾಡಲಿ, ಯಾವುದೇ ಸಂಘಟನೆಯನ್ನು ನಿಷೇಧಿಸಲಿ, ಆದರೆ ಮೊದಲು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲಿ. ರಾಜ್ಯದ ಕರಾವಳಿ ಭಾಗದಲ್ಲಿ ಶಾಂತಿ ಸ್ಥಾಪಿಸುವ ಕೆಲಸ ಮಾಡಲಿ.

ಎಲ್ಲರೂ ತಮ್ಮ, ತಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳುತ್ತಾರೆ. ಪೊಲೀಸರು ಸ್ವಾತಂತ್ರ್ಯವಾಗಿ ತನಿಖೆ ಮಾಡಲು ಬಿಡಿ. ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾರಿ ತಪ್ಪಿಸಬಾರದು.

ನಾನು ನಿನ್ನೆ ಸಂಜೆಯೇ ಬೆಳ್ಳಾರೆಗೆ ತೆರಳಲು ನಿರ್ಧರಿಸಿದ್ದೆ. ಆದರೆ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ತಿಳಿಯಾದ ನಂತರ ಭೇಟಿ ನೀಡಿ ಎಂದು ಸಲಹೆ ನೀಡಿದರು. ಇಂತಹ ಘಟನೆಗಳು ಇನ್ನು ಮುಂದೆ ನಡೆಯಬಾರದು.

ಜನಾಕ್ರೋಶಕ್ಕೆ ಹೆದರಿ ಸರ್ಕಾರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಇದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ. ನಾವು ಈ ಪಟ್ಟ ಈಗಾಗಲೇ ನೀಡಿದ್ದೇವೆ. ಸರ್ಕಾರ ಸರಿಯಾಗಿ ಇದ್ದಿದ್ದರೆ ಯಾಕೆ ಹೆದರಬೇಕು? ಕಾರ್ಯಕ್ರಮ ಮಾಡಬೇಕಿತ್ತು. ಅವರು ಸಾಧನೆ ಮಾಡದೇ ಈ ಕಾರ್ಯಕ್ರಮ ಮಾಡಲು ಮುಂದಾಗಿದ್ದೇ ತಪ್ಪು ‘ ಎಂದರು.

ಬಿಜೆಪಿ ನಾಯಕರು ಅನಗತ್ಯವಾಗಿ ಕಾಂಗ್ರೆಸ್ ನಾಯಕರನ್ನು ಎಳೆದು ತಂದು ರಾಜಕಾರಣ ಮಾಡಬಾರದು. ಕಾರ್ಯಕರ್ತರು ಯಾವುದೇ ಪಕ್ಷದವರಾದರೂ ಅವರ ಭಾವನೆಗೆ ಗೌರವ ನೀಡಲೇ ಬೇಕು. ಅವರು ಒಂದು ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಾರೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ನಾನು ರಾಜಕಾರಣ ಮಾಡಲು ಇಚ್ಛಿಸುವುದಿಲ್ಲ. ಆ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಲ್ಲರಿಗೂ ರಕ್ಷಣೆ ಅಸಾಧ್ಯ ಎಂಬ ತೇಜಸ್ವಿ ಸೂರ್ಯ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಹಾಗಿದ್ದರೆ ಸರ್ಕಾರ ಏಕೆ ಇರಬೇಕು? ಮೈಸೂರಿನಲ್ಲಿ ಅತ್ಯಾಚಾರ ಆದಾಗ ಅಷ್ಟು ಹೊತ್ತಲ್ಲಿ ಆಕೆ ಹೊರಗೆ ಯಾಕೆ ಹೋಗಬೇಕಿತ್ತು? ಎಂದು ಗೃಹ ಸಚಿವರೇ ಕೇಳಿದ್ದರು. ನಾಲ್ಕೈದು ದಿನಗಳ ಹಿಂದೆಯೂ ಆ ಭಾಗದಲ್ಲಿ ಕೊಲೆಯಾಗಿದ್ದು, ಇವರು ಯಾವ ಕ್ರಮ ಕೈಗೊಂಡಿದ್ದಾರೆ? ನಾನು ನಿನ್ನೆ ರಾತ್ರಿ ಡಿಐಜಿ ಜತೆ ಮಾತನಾಡಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಈ ಪ್ರಕರಣದಲ್ಲಿ ಮುಕ್ತ ತನಿಖೆ ಆಗಬೇಕು. ರಾಜಕಾರಣಿಗಳು ಮಾತು ಕಡಿಮೆ ಮಾಡಬೇಕು. ಪೊಲೀಸರು ಕೆಲಸ ಮಾಡಬೇಕು ‘ ಎಂದರು.

See also  ಸೆಪ್ಟೆಂಬರ್‌ನಲ್ಲಿ 36 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಿರುವ ಗುಜರಾತ್

ಕಾಂಗ್ರೆಸ್ ಕಾಲದಲ್ಲಿ 22 ಕೊಲೆಯಾಗಿತ್ತು ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ ನಮ್ಮ ಕಾಲದಲ್ಲಿ 25 ಆಗಿತ್ತೋ, ಇವರ ಕಾಲದಲ್ಲಿ 35 ಆಗಿದೆಯೋ, 100 ಆಗಿದೆಯೋ ಎಂಬ ಬಗ್ಗೆ ಮಾಧ್ಯಮಗಳೇ ಪಟ್ಟಿ ಪ್ರಕಟಿಸಿವೆ’ ಎಂದರು.

ಕಾಂಗ್ರೆಸ್ ಬೆಂಬಲಿತ ಮತಾಂಧ ಶಕ್ತಿಗಳು ಈ ಕೃತ್ಯದ ಹಿಂದೆ ಇವೆ ಎಂಬ ಆರೋಪಕ್ಕೆ, ‘ ಅವರು ಕೇವಲ ರಾಜಕೀಯ ಆರೋಪ ಮಾಡುತ್ತಾರೆ. ಆ ರೀತಿ ಇದ್ದರೆ ಅದನ್ನು ಸಾಬೀತುಪಡಿಸಿ, ಶಿಕ್ಷೆ ನೀಡಲಿ. ಯಾರು ಬೇಡ ಎಂದವರು? ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ‘ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು