ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೌರ್ಜನ್ಯಕ್ಕೊಳಗಾದವರ ಹೆಸರನ್ನು ಬಹಿರಂಗಪಡಿಸದಂತೆ ಪೊಲೀಸರಿಗೆ ಸೂಚಿಸಲಾಗಿದೆ ತಿಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ, ಕರ್ನಾಟಕ ಮಕ್ಕಳ ಹಕ್ಕು ನಿಗಾ ಕೇಂದ್ರ ಹಾಗೂ ಯೂನಿಸೆಫ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ರಕ್ಷಣೆ ಮತ್ತು ನ್ಯಾಯ ಕುರಿತ ಸಮಾಲೋಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಸ್ಕೋ ಕಾಯಿದೆ ಜಾರಿಗೆ ತರಲಾಗಿದೆ. ಅತ್ಯಾಚಾರ ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು, ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ತೆರೆಯಲಾಗಿದೆಎಂದು ಹೇಳಿದರು.
ಮಾನವ ಸಾಗಾಟ, ಬಾಲ್ಯವಿವಾಹ ತಡೆಗೂ ಕ್ರಮ ಕೈಗೊಳ್ಳಲಾಗಿದೆ. ದೇವದಾಸಿಯರನ್ನು ಸಮಾಜದ ಮುಖ್ಯವಾಹಿನೆಗೆ ತರಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಮಕ್ಕಳಲ್ಲಿನ ಅಪೌಷ್ಠಿಕತೆ ನೀಗಿಸಲು ಮಧ್ಯಾಹ್ನದ ಬಿಸಿಯೂಟ, ಹಾಲು ವಿತರಣೆ, ಕಬ್ಬಿಣಾಂಶಯುಕ್ತ ಮಾತ್ರೆ ನೀಡಿಕೆ ಹಾಗೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಕೆಲವೇ ವರ್ಷಗಳಲ್ಲಿ ರಾಜ್ಯದಲ್ಲಿ ಅಪೌಷ್ಠಿಕತೆ ನಿವಾರಣೆಯಾಗಲಿದೆ ಎಂದು ಅವರು ತಿಳಿಸಿದರು.