ಬೆಂಗಳೂರು: ಧರ್ಮಸ್ಥಳದ ಮಂಜುನಾಥಸ್ವಾಮಿ, ಕೊಲ್ಲೂರಿನ ಮುಕಾಂಬಿಕಾ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರಸಂಹಿತೆ (ಡ್ರೆಸ್ಕೋಡ್) ಜಾರಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯದ ಧರ್ಮಸ್ಥಳದ ಮಂಜುನಾಥಸ್ವಾಮಿ, ಕೊಲ್ಲೂರಿನ ಮುಖಾಂಬಿಕಾ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ನಂಜುಂಡೇಶ್ವರ, ಕುಣಿಗಲ್ನ ಯಡಿಯೂರು ಸಿದ್ದಲಿಂಗೇಶ್ವರ ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲು ಚಿಂತನೆ ನಡೆದಿದೆ. ವಸ್ತ್ರ ಸಂಹಿತೆ ಜಾರಿಯಾದರೆ ಪುರುಷರು ಪಂಚೆ, ಮಹಿಳೆಯರು ಸೀರೆ, ದಾವಣಿಯನ್ನು ಧರಿಸಬೇಕು. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿಕೊಳ್ಳುವಂತಿಲ್ಲ. ಈಗಾಗಲೇ ವಿಶ್ವಪ್ರಸಿದ್ಧ ತಿರುಪತಿ, ಕೇರಳದ ಅಯ್ಯಪ್ಪಸ್ವಾಮಿ, ತಮಿಳುನಾಡಿನಲ್ಲಿ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಕಡ್ಡಾಯವಾಗಿ ವಸ್ತ್ರಸಂಹಿತೆಯನ್ನು ಪಾಲನೆ ಮಾಡಬೇಕೆಂಬ ನಿಯಮವಿದೆ. ಒಂದು ವೇಳೆ ಆಡಳಿತ ಮಂಡಳಿ ವಿಧಿಸಿರುವ ಬಟ್ಟೆಗಳನ್ನು ಧರಿಸದೆ ಮನಸೋ ಇಚ್ಛೆ ಬಟ್ಟೆ ಹಾಕಿಕೊಂಡರೆ ದೇವಸ್ಥಾನಕ್ಕೆ ಪ್ರವೇಶ ಸಿಗುವುದಿಲ್ಲ.ಇಷ್ಟಕ್ಕೂ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮದ ಹಿಂದೆ ಪ್ರಮುಖ ಕಾರಣಗಳಿವೆ. ಇದೇನೆಂದರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ಬರುವವರು ಹೇಗೆಂದರೆ ಹಾಗೆ ಬರುತ್ತಿದ್ದರು.
ತಮಗೆ ಸ್ವೇಚ್ಛಾಚಾರವಿದೆ ಎಂಬ ಕಾರಣಕ್ಕಾಗಿ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಬರ್ಮೋಡಾ ಸೇರಿದಂತೆ ಮತ್ತಿತರ ಬಟ್ಟೆಗಳನ್ನು ಹಾಕಿಕೊಂಡು ದೇವರ ದರ್ಶನ ಪಡೆಯುತ್ತಿದ್ದರು. ಇದು ಕೆಲವು ಭಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಮಾಡಿದರೆ ಅಸಂಬದ್ಧವಾದ ಬಟ್ಟೆಗಳನ್ನು ಧರಿಸುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಹೀಗಾಗಿ ಮುಜರಾಯಿ ಇಲಾಖೆಗೆ ತಿದ್ದುಪಡಿ ಮಾಡಬೇಕೆಂದು ಕೆಲವರು ಒತ್ತಾಯ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದ್ದು, ಪ್ರಾರಂಭಿಕ ಹಂತದಲ್ಲಿ ಹತ್ತು ದೇವಸ್ಥಾನಗಳಿಗೆ ಮಾತ್ರ ವಸ್ತ್ರ ಸಂಹಿತೆಯನ್ನು ಕಡ್ಡಾಯ ಮಾಡಲಿದೆ