ಬೆಂಗಳೂರು: ಕನ್ನಡ ಪ್ರಮುಖ ಸಾಹಿತಿ ಸಾ.ಶಿ ಮರುಳಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮರುಳಯ್ಯ ಅವರನ್ನು ಜನವರಿ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
ಮರುಳಯ್ಯ ಅವರು ಇಬ್ಬರು ಗಂಡುಮಕ್ಕಳು, ಓರ್ವ ಮಗಳನ್ನು ಅಗಲಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 1931ರಲ್ಲಿ ಸಾ.ಶಿ. ಮರುಳಯ್ಯನವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದಲ್ಲಿ ಜನಿಸಿದ್ದರು. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಸಾಸಲು ಗ್ರಾಮದಲ್ಲಿ.ಚಾಮರಾಜನಗರ, ತುಮಕೂರು, ದಾವಣಗೆರೆ, ಶಿವಮೊಗ್ಗ, ಚನ್ನಪಟ್ಟಣ, ಮಂಗಳೂರು, ಬೆಂಗಳೂರುಗಳ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಸುಮಾರು ಮೂವತ್ತು ವರ್ಷಗಳ ಬೋಧನಾನುಭವವನ್ನು ಹೊಂದಿದ್ದರು. 1995 ರಿಂದ 1998ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಾವ್ಯ, ಪ್ರಹಸನ, ಜೀವನ ಚಿತ್ರಣ, ಕಾದಂಬರಿ, ಸಣ್ಣಕಥೆ, ನಾಟಕ, ವಿಮರ್ಶೆ, ಸಂಶೋಧನೆ, ಜಾನಪದ, ವ್ಯಾಕರಣ ಮುಂತಾದ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು,40ಕ್ಕೂ ಹೆಚ್ಚು ನೃತ್ಯ ರೂಪಕಗಳನ್ನು ಪ್ರಕಟಿಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ ಮುಖ್ಯವಾದವುಗಳು. ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ಇಷಾಂಶು ಮತ್ತು ಅಭಿಜ್ಞ.