ಬೆಂಗಳೂರು: ನಗರದ ಹೊರವಲಯದಲ್ಲಿರುವ ವಿಬ್ ಗಯಾರ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಭಾನುವಾರ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ತೂರು ಹತ್ತಿರದ ವಿಬ್ಗಯಾರ್ ಶಾಲೆಗೆ ಭಾನುವಾರ ಮುಂಜಾನೆ ನುಗ್ಗಿದ ಚಿರತೆ ಭೀತಿ ಉಂಟುಮಾಡಿದ್ದು, ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯ ನಡುವೆ ಚಿರತೆ ದಾಳಿಯಿಂದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹಾಗೂ ಖಾಸಗಿ ಸುದ್ದಿ ವಾಹನಿಯ ವೀಡಿಯೋಗ್ರಾಫರ್ ಬೋನಿ ಮೋನಿಸ್ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರ್ತೂರು ಸಮೀಪದ ವಿಬ್ಗಯಾರ್ ಶಾಲೆಗೆ ಮುಂಜಾನೆ ಸುಮಾರು 4 ಗಂಟೆಗೆ ಹತ್ತಿರದ ಅರಣ್ಯದಿಂದ ಚಿರತೆ ನುಗ್ಗಿದೆ. ಬಳಿಕ ಶಾಲಾ ಆವರಣದಲ್ಲಿ ಮನಬಂದಂತೆ ಓಡಾಡಲಾರಂಭಿಸಿ ಕತ್ತಲಲ್ಲಿ ದಿಕ್ಕು ಕಾಣದೆ ಜೋರಾಗಿ ಗುಟುರು ಹಾಕಿದೆ. ಈ ಶಬ್ದಕ್ಕೆ ಭದ್ರತಾ ಕಾವಲುಗಾರ ಬಾಬುಗೆ ಎಚ್ಚರವಾಯಿತಾದರೂ ಯಾವುದೋ ಪ್ರಾಣಿ ಓಡಾಡುತ್ತಿರಬಹುದು ಎಂದು ಸುಮ್ಮನಾಗಿದ್ದರು. ಬೆಳಗ್ಗೆ 5 ಗಂಟೆಗೆ ಎದ್ದು ಶೌಚಕ್ಕೆ ತೆರಳಿದ ಅವರಿಗೆ ಮತ್ತೆ ಚಿರತೆ ಶಬ್ದ ಕೇಳಿಸಿದಾಗ ಶಾಲೆಯ ಆವರಣದೊಳಗೆ ಯಾವುದೋ ಕಾಡು ಪ್ರಾಣ ನುಗ್ಗಿದೆ ಎಂದು ಅನುಮಾನಗೊಂಡರು. ತಕ್ಷಣ ಶಾಲೆಯ ಸಿಸಿ ಟೀವಿ ಕ್ಯಾಮಾರಾಗಳನ್ನು ಪರಿಶೀಲಿಸಿದಾಗ ಚಿರತೆ ಓಡಾಡುತ್ತಿರುವುದು ಪತ್ತೆಯಾಗಿದೆ. ಸೆಕ್ಯೂರಿಟಿ ಏಜೆನ್ಸಿಯವರು ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರಿಗೆ ವಿಷಯ ತಿಳಿಸಿ ನಂತರ ವರ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸುದ್ದಿ ತಿಳಿದು ಬೆಳಗ್ಗೆ 8 ಗಂಟೆಗೆ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶಾಲಾ ಕೊಠಡಿ ಮತ್ತು ಆವರಣದಲ್ಲಿ ಅಳವಡಿಸಿರುವ 200ಕ್ಕೂ ಅಧಿಕ ಸಿಸಿ ಕ್ಯಾಮಾರಳ ದೃಶ್ಯಾವಳಿಗಳ ಪರಿಶೀಲನೆ ನಡೆಸಿದರು.
ಚಿರತೆ ಬೇರೆಡೆ ಓಡಿ ಹೋಗಿದೆ ಎಂದು ಭಾವಿಸಿ ಕಾರ್ಯಾಚರಣೆ ಸ್ಥಗಿತಕ್ಕೆ ಮುಂದಾಗಿದ್ದರು. ಅಷ್ಟರಲ್ಲಿ ಮತ್ತೆ ಶಾಲಾ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಯಿತು. ನಂತರ ಶಾಲೆಗೆ ನಾಲ್ಕು ಬೋನುಗಳನ್ನು ತರಸಿಕೊಂಡ ಸಿಬ್ಬಂದಿ, ತಮ್ಮಲ್ಲೇ ಹತ್ತು ಮಂದಿಯನ್ನು ಪ್ರತ್ಯೇಕವಾಗಿ ವಿಂಗಡಿಸಿ ತಂಡಗಳನ್ನು ರಚಿಸಿಕೊಂಡು ಚಿರತೆ ಬೇಟೆ ಪುನಾರಂಭಿಸಿದರು.ಈ ನಡುವೆ ಪೊದೆಯಲ್ಲಿ ಆಶ್ರಯ ಪಡೆದಿದ್ದ ಚಿರತೆ ಮಧ್ಯಾಹ್ನ 3.30ರ ವೇಳೆಗೆ ಅಲ್ಲಿಂದ ಜಿಗಿದು ಶಾಲಾ ಆವರಣದೊಳಗೆ ನುಗ್ಗಿತು. ಅಲ್ಲಿಂದ 8 ಅಡಿ ಎತ್ತರದ ತಡೆಗೋಡೆ ಮೇಲೆ ನೆಗೆದು ಕಟ್ಟಡದ ಒಳಕ್ಕೆ ಜಿಗಿದು ಕೊಠಡಿಯಿಂದ ಕೊಠಡಿಗೆ ಅಲೆದಾಡಿತು. ಇತ್ತ ಚಿರತೆ ಕಂಡು ಜನ ಕೇಕೆ ಹಾಕಿದಾಗ ಗಾಬರಿಗೊಂಡು ಮನಬಂದಂತೆ ಓಡಾಡಲಾರಂಭಿಸಿತು. ಶಾಲೆಯ ಸಜ್ಜಾದಿಂದ ಸಜ್ಜಾಗೆ ಜಿಗಿಯುತ್ತಾ ತಪ್ಪಿಸಿಕೊಳ್ಳಲು ಪ್ರಯಾಸ ಪಟ್ಟು ವಿಫಲವಾಯಿತು.
ಈ ಮಧ್ಯೆ ಚಿರತೆ ಶೌಚಾಲಯದೊಳಗೆ ಹೋಗುತ್ತಿದ್ದಂತೆ ಸಿಬ್ಬಂದಿ ಹೊರಗಿನಿಂದ ಬಾಗಿಲು ಮುಚ್ಚಿದರು. ಬಳಿಕ ಶೌಚಾಲಯದ ಎಲ್ಲ ಕಿಂಡಿಗಳಿಗೂ ಬಲೆಗಳನ್ನು ಹಾಕಿ ಚಿರತೆಯನ್ನು ಖೆಡ್ಡಾಕ್ಕೆ ಕೆಡವಲು ಸಜ್ಜಾದರು. ಕೆಲ ಹೊತ್ತು ಶಾಂತವಾಗಿ ಶೌಚಾಲಯದಲ್ಲಿದ್ದ ಚಿರತೆ ಏಕಾಏಕಿ ಕಿಂಡಿಯೊಂದರಿಂದ ಹೊರ ಜಿಗಿಯಿತು. ಚಿರತೆ ನುಗ್ಗಿದ ರಭಸಕ್ಕೆ ಬಲೆ ಕಳಚಿಕೊಂಡು ಅರಣ್ಯ ಸಿಬ್ಬಂದಿ ಯೋಜನೆ ಕೈ ಕೊಟ್ಟಿತು.ಶಾಲೆಯ ಆವರಣದಲ್ಲಿ ನಡೆಯುತ್ತಿದ್ದ ಗದ್ದಲದಿಂದ ಕೆರಳಿದ ಚಿರತೆ ಅರಣ್ಯ ಸಿಬ್ಬಂದಿ ವಿರುದ್ಧ ತಿರುಗಿ ಬಿತ್ತು. ಆಗ ಈಜುಕೊಳದ ಬಳಿ ಸಂಜಯ್ ಗುಬ್ಬಿ ಅವರು ಚಿರತೆ ದಾಳಿಗೆ ತುತ್ತಾದರು. ಅಷ್ಟರಲ್ಲಿ ಖಾಸಗಿ ಸುದ್ದಿವಾಹಿನಿ ಛಾಯಾಗ್ರಾಹಕ ಪಕ್ಕದಲ್ಲೇ ಬಂದಿದ್ದರಿಂದ ಸಂಜಯ್ ಗುಬ್ಬಿ ಅವರನ್ನು ಬಿಟ್ಟು ಛಾಯಾಗ್ರಾಹಕ ಬೋನಿ ಮೋನಿಸ್ ಅವರನ್ನು ಬೆನ್ನಟ್ಟಿತು. ಬೋನಿ ಮೋನಿಸ್ ಗೇಟ್ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಚಿರತೆ ಮೈಮೇಲೆ ಎಗರುತ್ತಿದ್ದಂತೆ ಸಂತೋಷ್ ಪಾರಾಗಲು ಸೆಣಸಾಡಿದರು. ಅಷ್ಟರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಿರಂದ ಸಂತೋಷ್ ಪ್ರಾಣಪಾಯದಿಂದ ಪಾರಾದರು.
ಚಿರತೆಗೆ ಬಂದೂಕಿನಲ್ಲಿ ಸಿಬ್ಬಂದಿ ಚುಚ್ಚು ಮುದ್ದಿನ ಗುಂಡು ಹಾರಿಸಿದರು. ಈ ಗುಂಡಿನ ಶಬ್ಧಕ್ಕೆ ಆತಂಕಗೊಂಡ ಚಿರತೆ ಮತ್ತೆ ಕಟ್ಟಡದೊಳಗೆ ಓಡಿ ಹೋಗಿ ಶೌಚಾಲಯದೊಳಗೆ ಜಿಗಿಯಿತು. ಆದರೆ, ಅರವಳಿಕೆ ಚುಚ್ಚು ಮುದ್ದು ತಗುಲಿದ್ದರಿಂದ ಕೆಲ ಹೊತ್ತಿನ ಬಳಿಕ ಚಿರತೆ ಪ್ರಜ್ಞೆ ಕಳೆದುಕೊಂಡಿತು. ಅಷ್ಟರಲ್ಲಿ ಶೌಚಾಲಯ ಬಳಿಗೆ ಬೋನು, ಬಲೆ ಹಾಗೂ ಹೆಚ್ಚುವರಿ ಸಿಬ್ಬಂದಿ ಕರೆಸಿಕೊಂಡ ಅಧಿಕಾರಿಗಳು, ಅರೆಪ್ರಜ್ಞಾವಸ್ಥೆಯಲ್ಲಿದ್ದ ಚಿರತೆಯನ್ನು ಬಲೆಗೆ ಹಾಕಿಕೊಂಡರು. ಅಂತಿಮವಾಗಿ ಹದಿಮೂರು ತಾಸುಗಳ ಆಪರೇಷನ್ ಚಿರತೆ ಕಾರ್ಯಾಚರಣೆ ಸಂಜೆ 7 ಗಂಟೆ ವೇಳೆಗೆ ಮುಕ್ತಾಯವಾಯಿತು.
ಹತ್ತು ದಿನಗಳ ಹಿಂದೆ ಚಿಕ್ಕನಾಗಮಂಗಲ ಮತ್ತು ಸುಸ್ಕೂಲು ಸಮೀಪದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ವಿಷಯ ತಿಳಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದೂ ಕೆಲ ಸಿಬ್ಬಂದಿ ನಾಯಿ ಮತ್ತು ಕುರಿಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ್ದರು. ಅಷ್ಟರೊಳಗೆ ವಿಬ್ ಗಯಾರ್ ಶಾಲೆಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಬೆಂಗಳೂರು ಉತ್ತರ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಕರಿಯಪ್ಪ ತಿಳಿಸಿದರು.