ಬೆಂಗಳೂರು: ಪ್ರಾಣಿಗಿರುವಷ್ಟು ಒಳ್ಳೆತನ ಮನುಷ್ಯನಿಗಿಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯ. ಬೆಂಗಳೂರಿನ ಉತ್ತರ ಯಲಹಂಕದ ಚೌಡೇಶ್ವರಿ ಬಡಾವಣೆಯ ಅಜ್ಜಿಯೊಬ್ಬರಿಗೆ ಕೋತಿಯೇ ಆಸರೆಯಾಗಿರುವುದು ಕಂಡಾಗ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ.
ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ತಂದೆ-ತಾಯಂದಿರು ಹೊರೆಯಾಗುತ್ತಾರೆಂದು ವೃದ್ದಾಶ್ರಮಕ್ಕೆ ಸೇರಿಸುತ್ತಾರೆ. ಇಲ್ಲವೇ ತಂದೆ ತಾಯಂದಿರಿಂದ ತಾವೇ ದೂರವಾಗಿ ನೆಲೆಸುತ್ತಾರೆ. ಹಾಗೆಯೇ ಇಲ್ಲೊಬ್ಬಳು ಅಜ್ಜಿಗೆ ತನ್ನ ಹೆತ್ತ ಮಗನೇ ದೂರ ಮಾಡಿದ್ದರಿಂದ ಆಕೆ ಒಬ್ಬಂಟಿಯಾಗಿ ಜೀವಿಸುತ್ತಿದ್ದಳು. ಹೀಗಿರುವಾಗ ಒಂದು ದಿನ ನಾಯಿಗಳ ದಾಳಿಗೆ ಸಿಕ್ಕಿ ಕೋತಿಯೊಂದು ನರಳಾಡುತ್ತಿತ್ತು. ಈ ಸಂದರ್ಭದಲ್ಲಿ ಕೋತಿಗೆ ರಕ್ಷಣೆ ನೀಡಿದ್ದು ಈ ಅಜ್ಜಿ ಚಿನ್ನಮ್ಮ(64). ಗಂಡ ಕಳೆದುಕೊಂಡಿದ್ದ ಚಿನ್ನಮ್ಮಳ ಒಂಟಿತನವನ್ನ ದೂರ ಮಾಡಿ ಕೋತಿ ಮರಿ ಮನೆಗೆ ಮಹಾಲಕ್ಷ್ಮಿಯಾದಳು. ಅಂದಿನಿಂದ ಇಂದಿನವರೆಗೂ ಇವರಿಬ್ಬರ ಸಂಬಂಧ ತಾಯಿ-ಮಗಳಿಗಿಂತ ಹೆಚ್ಚಾಗಿ ಮುಂದುವರೆದಿದೆ.
ಸಣ್ಣ ಬಾಡಿಗೆ ಮನೆಯಲ್ಲಿ ಕೋತಿಯೊಂದಿಗೆ ಅಜ್ಜಿ ಜೀವನ ಸಾಗಿಸುತ್ತಿದ್ದಾಳೆ. ಕೋತಿಗೆ ಅಜ್ಜಿ ಎಂದರೆ ಪ್ರಾಣ. ತನಗೆ ಆಹಾರವನ್ನು ಅಜ್ಜಿಗೆ ಕೊಡಬೇಕೇ ಹೊರತು ಬೇರೆ ಯಾರು ಕೊಟ್ಟರು ಸ್ವೀಕರಿಸುತ್ತಿಲ್ಲ. ಬೆಳಗ್ಗೆ ಎದ್ದ ಕೂಡಲೇ ಅಜ್ಜಿ ಜೊತೆ ವಾಕಿಂಗ್ ಮಾಡುವುದು ಈ ಕೋತಿಯ ದಿನನಿತ್ಯದ ಕಾರ್ಯ. ಅಜ್ಜಿಯ ಎಲ್ಲಾ ಮಾತುಗಳನ್ನ ಈ ಕೋತಿ ಅರ್ಥಮಾಡಿಕೊಳ್ಳುತ್ತೆ. ಅಜ್ಜಿಗೆ ಯಾರಾದರೂ ತೊಂದರೆ ಕೊಟ್ಟರೆ ಅವರ ಮೇಲೆ ದಾಳಿ ನಡೆಸುತ್ತೆ. ಒಂಟಿತನ ಕಾಡುತ್ತಿದ್ದ ಅಜ್ಜಿಗೆ ಕೋತಿಯೇ ಆಧಾರಸ್ತಂಭವಾಗಿ ಪ್ರೀತಿಯನ್ನು ನೀಡುತ್ತಿದೆ. ಅಜ್ಜಿ ಕೋತಿ ಜತೆ ಸಂತಸದಿಂದ ಜೀವನ ಕಳೆಯುತ್ತಿದ್ದಾರೆ.