ಬೆಂಗಳೂರು: ಹನಿಟ್ರ್ಯಾಪ್ ದಂಧೆ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ಕಿರಾತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಹುಡುಗಿಯರನ್ನು ಮುಂದಿಟ್ಟುಕೊಂಡು ಈ ಕೆಲಸ ನಡೆಸುತ್ತಿದ್ದು, ದಂಧೆಯಲ್ಲಿ ತೊಡಗಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ.
ಈ ಪೈಕಿ ಮೂವರು ಯುವತಿಯರೂ ಸೇರಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು ಆನಂದ್ ಆಚಾರ್ (43 ವರ್ಷ), ರವಿಕುಮಾರ್ (42 ವರ್ಷ) ಎಂದು ಗುರುತಿಸಲಾಗಿದ್ದು, ಇವರೊಂದಿಗೆ ಮೂವರು ಯುವತಿಯರನ್ನೂ ಬಂಧಿಸಲಾಗಿದೆ.
ಆರೋಪಿಗಳು ಲೊಕ್ಯಾಂಟೋ ಎಂಬ ವೆಬ್’ಸೈಟ್’ನಲ್ಲಿ ಹುಡುಗಿಯರ ಫೋಟೋಗಳನ್ನು ಹಾಕಿ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡುವಂತಹ ಪೋಸ್ಟ್ ಹಾಕುತ್ತಿದ್ದರು. ಜತೆಗೆ, ಮೊಬೈಲ್ ಸಂಖ್ಯೆ ನೀಡುತ್ತಿದ್ದರು. ಇದಕ್ಕೆ ಫಣೀಂದ್ರ ಎಂಬುವರು ಪ್ರತಿಕ್ರಿಯೆ ನೀಡಿದ್ದರು. ಅವರನ್ನು ವಿಜಯನಗರ ಬಸ್ ನಿಲ್ದಾಣದ ಬಳಿಗೆ ಬರುವಂತೆ ಯುವತಿಯಿಂದ ಹೇಳಿಸಿದ್ದರು. ಅದರಂತೆ ಫಣೀಂದ್ರ ಬಸ್ ನಿಲ್ದಾಣದ ಬಳಿಗೆ ಹೋಗಿದ್ದರು. ಈ ವೇಳೆ ಯುವತಿ ಫಣೀಂಧ್ರ ಅವರನ್ನು ಖಾಸಗಿ ಹೊಟೆಲ್ ನ ರೂಮ್ ಗೆ ಕರೆದುಕೊಂಡು ಹೋಗಿದ್ದರು.
ಕೆಲವೇ ನಿಮಿಷಗಳಲ್ಲಿ ಆರು ಮಂದಿ ಅವರಿದ್ದ ಕೊಠಡಿಗೆ ಬಂದಿದ್ದರು. ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಚಿತ್ರಗಳಿದ್ದು, ಪೊಲೀಸರಿಗೆ ನೂರು ನೀಡುವುದಾಗಿ ಬೆದರಿಸಿದ್ದರು. ಬಳಿಕ ಫಣೀಂದ್ರ ಅವರ ಬಳಿ ಇದ್ದ ರು.10 ಸಾವಿರ ನಗದನ್ನು ಕಿತ್ತುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು