ಬೆಂಗಳೂರು: ಮಾಜಿ ಸಚಿವ ಅಂಬರೀಷ್, ನಟ ಅಂಬರೀಷ್ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆಯು ಕೇಳಿಬರುತ್ತಿದ್ದು, ಕಳೆದ ಮೂರು ತಿಂಗಳಿಂದಲೇ ಅಂಬಿಯನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆಯುತ್ತಿದೆ.
ಅಂಬರೀಷ್ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ ಇತ್ತೀಚೆಗೆ ದುಬೈನಲ್ಲಿ ಕಾರ್ಯ ಕ್ರಮವೊಂದರಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಆಗಮಿಸಿದರೆ ರಾಜ್ಯಸಭೆಗೆ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂಬರೀಷ್ರನ್ನು ಭೇಟಿಯಾಗಿ 3 ತಿಂಗಳ ಹಿಂದೊಮ್ಮೆ ಆಹ್ವಾನಿಸಿದ್ದರೂ ಆ ಸಮಯದಲ್ಲಿ ಒಪ್ಪಿರಲಿಲ್ಲ. ವೈಯಕ್ತಿಕ ಆಸಕ್ತಿ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಲು ಆರ್. ಅಶೋಕ್ ಪ್ರಯತ್ನದಲ್ಲಿದ್ದಾರೆ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಕೂಡ ಕಾಂಗ್ರೆಸ್ ನಿಂದ ಹೊರನಡೆದಿದ್ದು, ಈ ಸಮಯದಲ್ಲಿ ಅಂಬಿಯನ್ನು ಪಕ್ಷಕ್ಕೆ ಆಹ್ವಾನಿಸಿದರೆ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿ ಮಾತುಕತೆ ನಡೆಯುತ್ತಿದೆ.