ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ಪುರಸಭೆ ಸದಸ್ಯ ಶ್ರೀನಿವಾಸ್ ಪ್ರಸಾದ್ (38) ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಬಳಿ ನಡೆದಿದೆ.
ಶ್ರೀನಿವಾಸ್ ಅಲಿಯಾಸ್ ಕಿತ್ತಗಾನಹಳ್ಳಿ ವಾಸು ಅವರು ಬೆಳಗಿನ ಜಾವ 5 ಗಂಟೆಯ ಹೊತ್ತಿಗೆ ವಾಯುವಿಹಾರಕ್ಕೆ ತೆರಳಿದ್ದ ಸಂಧರ್ಭ ಅಪರಿಚಿತರ ತಂಡವೊಂದು ಹೊಡೆದು ಹಾಕಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಸಿಂಗ್ ಹೇಳಿದ್ದಾರೆ.
ಕಾರಿನಲ್ಲಿ ತೆರಳುತ್ತಿದ್ದಾಗ ಸೂರ್ಯ ಸಿಟಿ ಎಂಬ ಪ್ರದೇಶದ ಬಳಿ ಹರಿತವಾದ ಆಯುಧಗಳಿಂದ ಶ್ರೀನಿವಾಸ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಬಿಟಿಎಲ್ ಕಾಲೇಜಿನ ಬಳಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಹತ್ಯೆ ಖಂಡಿಸಿ ನೂರಾರು ಕಾರ್ಯಕರ್ತರು ರಸ್ತೆ ತಡೆ ನಡೆಸಲು ಮುಂದಾದರು.
ಬಿಜೆಪಿಯ ಕೇಂದ್ರ ಸಚಿವ ಅನಂತ ಕುಮಾರ್ ಸಿದ್ದರಾಮಯ್ಯ ಸರ್ಕಾರವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಾಗಿದ್ದು, ಬೆರಳಚ್ಚು ತಜ್ಞರು ಮತ್ತು ಸ್ಥಳೀಯ ಪೊಲೀಸರ ತಂಡ ಕುರುಹುಗಳ ಪತ್ತೆಗಾಗಿ ವ್ಯಾಪಕ ಶೋಧ ನಡೆಸಿದೆ.