ಬೆಂಗಳೂರು: ಕೊನೆಗೂ ಮಾಜಿ ಸಂಸದ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಕಾಂಗ್ರೆಸ್ ಗೆ ರಾಜೀನಾಮೆ ನೀಡುವ ಮೂಲಕ ಹಲವು ಸಮಯಗಳಿಂದ ರಾಜಕೀಯ ವಲಯದಲ್ಲಿದ್ದ ಕುತೂಹಲಕ್ಕೆ ಅಂತ್ಯ ಹಾಡಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ನಲ್ಲಿ ರಾಜಕೀಯ ಬದುಕು ಕಂಡುಕೊಂಡಿದ್ದ ವಿಶ್ವನಾಥ್ ಅವರು ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ತನ್ನದೇ ವಾಕ್ಚಾತುರ್ಯದಿಂದ ಪ್ರಮುಖ ನಾಯಕನಾಗಿ ಮೆರೆದಿದ್ದರು. ತಪ್ಪು ಮಾಡಿದಾಗ ಛಾಟಿ ಏಟು ನೀಡುತ್ತಿದ್ದ ಅವರು, ತಮ್ಮ ಪಕ್ಷದವರು ತಪ್ಪು ಮಾಡಿದರೂ ಸುಮ್ಮನಿರದೆ ಟೀಕಿಸುವ ಗುಣ ಹೊಂದಿದ್ದರು.
ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಅವರ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸಿತ್ತು. ಅಲ್ಲದೆ, ಕಾಂಗ್ರೆಸ್ ನಲ್ಲಿ ಅವರಿಗೆ ತಕ್ಕ ಸ್ಥಾನ ಮಾನ ನೀಡದೆ ಮೂಲೆ ಗುಂಪು ಮಾಡಲಾಗಿತ್ತು. ಇದು ಅವರನ್ನು ಕೆರಳಿಸಿತ್ತು. ಹಿಂದಿನ ಚುನಾವಣೆಯಲ್ಲಿ ಸಂಸದ ಸ್ಥಾನಕ್ಕೆ ನಿಂತು ಪರಾಭವಗೊಂಡ ಬಳಿಕವಂತು ಕಾಂಗ್ರೆಸ್ ಅವರನ್ನು ದೂರವೇ ಇಟ್ಟಿತ್ತು. ಯಾವಾಗ ಕಾಂಗ್ರೆಸ್ ನಲ್ಲಿ ತನಗೆ ಗೌರವ ಸಿಗುತ್ತಿಲ್ಲ ಎಂಬುದು ಗೊತ್ತಾಯಿತೋ ಅವರು ತಟಸ್ಥ ಧೋರಣೆ ತಾಳ ತೊಡಗಿದ್ದರು.
ಈ ನಡುವೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರನ್ನು ಟೀಕಿಸತೊಡಗಿದ್ದರಲ್ಲದೆ, ಜೆಡಿಎಸ್ ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ತನ್ನ ಬೆಂಬಲಿಗರೊಂದಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರಿಗೆ ರಾಜೀನಾಮೆ ಸಲ್ಲಿಸುವ ಮೂಲಕ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದಾರೆ.
ಕಾಂಗ್ರೆಸ್ ತೊರೆದ ಬಳಿಕ ಎಚ್.ವಿಶ್ವನಾಥ್ ಅವರು ಜೆಡಿಎಸ್ ಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿದ್ದು, ದೇವೇಗೌಡರು ಸೂಚಿಸುವ ದಿನಾಂಕದಂದು ಅವರು ಪಕ್ಷದ ಸದಸ್ಯತ್ವ ಪಡೆಯಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ವಿಶ್ವನಾಥ್ ಕೊಡಗು, ಮೈಸೂರಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ್ದು, ಸಮಾವೇಶವನ್ನು ಸದ್ಯದಲ್ಲೇ ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಬಲ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಮೈಸೂರು ವ್ಯಾಪ್ತಿಯಲ್ಲಿ ಸಿಎಂಗೆ ಪ್ರತಿಸ್ಪರ್ಧೆ ನೀಡಲು ಅದೇ ಸಮುದಾಯದ ಮತ್ತೊಬ್ಬ ನಾಯಕನ ಅವಶ್ಯಕತೆ ಜೆಡಿಎಸ್ಗಿತ್ತು. ಇದೀಗ ವಿಶ್ವನಾಥ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಶಕ್ತಿ ಬಂದಂತಾಗಿದೆ.
ಮತ್ತೊಂದೆಡೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಪ್ರಭಾವಿ ನಾಯಕರು ಕಾಂಗ್ರೆಸ್ ತೊರೆಯುವುದು ಕಂಡು ಬರುತ್ತಿದೆ. ಈಗಾಗಲೇ ಹಿರಿಯನಾಯಕ ಎಸ್.ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮುಖಂಡ ಶಿವರಾಮು ಮೊದಲಾದವರೆಲ್ಲರೂ ಪಕ್ಷ ಬಿಟ್ಟು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೇನಾಗುತ್ತೆ ಎನ್ನುವುದು ಕುತೂಹಲಕಾರಿಯಾಗಿದೆ