ಬೆಂಗಳೂರು: ಗುರುವಾರ ರಾತ್ರಿ ವೇಳೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಕೆಲವೊಂದು ಕಡೆಗಳಲ್ಲಿ ಮನೆ ಕುಸಿದು ಬಿದ್ದಿರುವುದು ವರದಿಯಾಗಿದೆ.
ಶುಕ್ರವಾರ ಕೆಲವೊಂದು ಕಡೆಗಳಲ್ಲಿ ರಸ್ತೆಯಲ್ಲೆಲ್ಲಾ ನೀರು ತುಂಬಿಕೊಂಡಿತ್ತು. ಮಾಗಡಿ ರಸ್ತೆಯ ಎಂಟನೇ ಕ್ರಾಸ್ ನಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ತಿಳಿದುಬಂದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋರಮಂಗಲ, ನೃಪತುಂಗ ರಸ್ತೆ, ಹಳೆ ಮದ್ರಾಸ್ ರಸ್ತೆ, ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆ ಇತ್ಯಾದಿ ಕಡೆಗಳಲ್ಲಿ ನೀರು ತುಂಬಿದ್ದರಿಂದ ವಾಹನಗಳು ಪರದಾಡುವಂತಾಯಿತು. ಕೆಲವೊಂದು ಕಡೆ ವಾಹನ ದಟ್ಟಣೆ ಹೆಚ್ಚಾಗಿ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಕೆಲವೊಂದು ವಾಹನಗಳು ಕೆಟ್ಟು ರಸ್ತೆ ಮಧ್ಯದಲ್ಲೇ ನಿಂತವು. ಇದರಿಂದ ಇತರ ಸವಾರರಿಗೆ ಭಾರೀ ಸಮಸ್ಯೆಯಾಯಿತು. ಕೆಲವೊಂದು ಕಡೆಗಳಲ್ಲಿ ಎರಡು ಅಡಿಯಷ್ಟು ನೀರು ತುಂಬಿ ವಾಹನಗಳು ರಸ್ತೆಯಲ್ಲಿದ್ದ ಗುಂಡಿಯಲ್ಲಿ ಸಿಲುಕಿಕೊಂಡವು.