ಬೆಂಗಳೂರು: ಕೆಬಿ ಕೋಳಿವಾಡ ಅವರು ಸ್ಪೀಕರ್ ಆಗಿದ್ದ ವೇಳೆ ವಿಧಾನ ಸೌಧದ ವಿವಿಧ ಹುದ್ದೆಗಳಿಗೆ ನೇಮಕವಾಗಿದ್ದ ಸುಮಾರು 104 ನೌಕರರಿಗೆ ಕಳೆದ 8 ತಿಂಗಳಿನಿಂದ ಸಂಬಳವೇ ಆಗಿಲ್ಲ. ಇದು ಕೇಳಲು ಅಚ್ಚರಿಯಾದರೂ ನಿಜವಾದ ವಿಚಾರ.
ಶುಕ್ರವಾರ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಅವರನ್ನು ಭೇಟಿಯಾದ ಸಂಬಳ ಸಿಗದ ನೌಕಕರು, ಡ್ರೈವರ್, ಡಾಟಾ ಎಂಟ್ರಿ ಆಪರೇಟರ್, ಪ್ರಥಮ ದರ್ಜೆ ಸಹಾಯಕರು, ಎರಡನೇ ದರ್ಜೆಯ ಸಹಾಯಕರು ಸೇರಿದಂತೆ ಹಲವು ಹುದ್ದೆಗಳಿಗೆ ಪ್ರಾರಂಭದಲ್ಲೇ ಕಡಿಮೆ ಸಂಬಳವನ್ನು ನಿಗದಿಮಾಡಲಾಗಿದೆ. ಇದೀಗ ಆ ನೋವಿನ ಜತೆಗೆ ಕಳೆದ 8 ತಿಂಗಳಿನಿಂದ ನಮಗೆ ಸಂಬಳವಾಗದೆ ಪರದಾಡುವಂತಾಗಿದೆ ಎಂದು ಅವರ ಬಳಿ ತಮ್ಮ ಅಳಲನ್ನು ಹೇಳಿಕೊಂಡರು. ಈ ಸಂಬಂಧ ವಿಚಾರಿಸುವುದಾಗಿ ರಮೇಶ್ ಕುಮಾರ್ ಅವರು ಭರವಸೆಯನ್ನು ನೀಡಿದ್ದಾರೆ.
ಸಚಿವಾಲಯದ ಮೂಲಗಳ ಪ್ರಕಾರ, ಹಣಕಾಸು ಇಲಾಖೆಯ ಅನುಮತಿಯಿಲ್ಲದೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿದೆ. ಈ ನೇಮಕಾತಿಯಲ್ಲಿ ಅಕ್ರಮಗಳು ನಡೆದ ಹಿನ್ನೆಲೆ ಸಂಬಳವನ್ನು ತಡೆಹಿಡಿಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.