ಬೆಂಗಳೂರು: ದೇವಸ್ಥಾನದ ಭಕ್ತರೊಬ್ಬರ ಮನೆಯಿಂದ ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿದ ಅರ್ಚಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರದಲ್ಲಿರುವ ಮಾರಮ್ಮಾ ದೇವಸ್ಥಾನದ ಅರ್ಚಕರಾದ ಶ್ರೀರಾಮಪುರದ ನಿವಾಸೊ ಲಕ್ಷ್ಮಣ ಮತ್ತು ಚಿಕ್ಕಬಳ್ಳಾಪುರದ ನಿವಾಸಿ ನಾಗರಾಜ ಎಂಬವರೇ ಬಂಧಿತರು. ಇವರು ಸುಮಾರು ಎಂಟು ಲಕ್ಷ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದರು.
ಮಾರಮ್ಮಾ ದೇವಸ್ಥಾನಕ್ಕೆ ಬರುತ್ತಿದ್ದ ಪವನ್ ಎಂಬವರು ಈ ಇಬ್ಬರು ಅರ್ಚಕರ ಜತೆಗೆ ಹೆಚ್ಚು ಆತ್ಮೀಯವಾಗಿದ್ದರು. ಇವರು ತಮ್ಮ ಕಾರನ್ನು ಇವರಿಬ್ಬರಿಗೆ ಬಳಸಲು ಕೂಡ ನೀಡುತ್ತಿದ್ದರು. ಇದೇ ವೇಳೆ ಕಾರಿನ ಕೀ ಚೈನ್ ನಲ್ಲಿದ್ದ ಮನೆಯ ಕೀಯ ನಕಲಿ ಮಾಡಿಕೊಂಡು ಪವನ್ ಅವರು ಅ.19ರಂದು ತನ್ನ ಕುಟುಂಬದದೊಂದಿಗೆ ಪ್ರವಾಸಕ್ಕೆ ಹೋದ ವೇಳೆ ಇವರು ಮನೆಗೆ ನುಗ್ಗಿ ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪವನ್ ಅವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ವೇಳೆ ಅರ್ಚಕರಿಗೆ ಮಾತ್ರ ಪ್ರವಾಸದ ವಿಚಾರ ತಿಳಿದಿರುವುದಾಗಿ ಕಂಡುಬಂದಿದೆ. ಇವರಿಬ್ಬರನ್ನು ವಿಚಾರಣೆ ನಡೆಸಿದ ವೇಳೆ ದರೋಡೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.