ಬೆಂಗಳೂರು: ಸುಲ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಹಾದೇವ ಸ್ವಾಮಿಗೆ ಸುಪ್ರೀಂಕೋರ್ಟ್ ಸೋಮವಾರ ಜಾಮೀನು ನೀಡಲು ನಿರಾಕರಿಸಿದೆ.
ಜಸ್ಟಿಸ್ ಎನ್ ವಿ ರಾಮನ್ ಅವರನ್ನು ಒಳಗೊಂಡಿರುವ ಸುಪ್ರೀಂಕೋರ್ಟ್ ನ್ಯಾಯಪೀಠವು ಸ್ವಾಮಿಗೆ ಜಾಮೀನು ನಿರಾಕರಿಸಿದೆ.
ಡಿಸೆಂಬರ್ 14, 208ರಲ್ಲಿ ಸುಲ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆ ಮಾಡಿ 17 ಮಂದಿ ಮೃತಪಟ್ಟಿದ್ದರು ಮತ್ತು 117 ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಮಂದಿರವನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಸ್ವಾಮಿ ಪ್ರಸಾದಕ್ಕೆ ಕೀಟನಾಶಕ ಬೆರೆಸಲು ಸಂಚು ಹೂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.
ಈ ಘಟನೆಯ ಬಳಿಕ ರಾಜ್ಯ ಆರೋಗ್ಯ ಇಲಾಖೆಯು ದೇವಸ್ಥಾನದಲ್ಲಿ ಪ್ರಸಾದ ಮತ್ತು ಅನ್ನಸಂತರ್ಪಣೆ ಮಾಡಲು ಕೆಲವೊಂದು ನಿಯಮಾವಳಿಗಳನ್ನು ರೂಪಿಸಿತ್ತು. ಘಟನೆ ಬಳಿಕ ದೇವಸ್ಥಾನಕ್ಕೆ ಬೀಗ ಜಡಿಯಲಾಗಿತ್ತು. ಈಗ ರಾಜ್ಯ ಮುಜರಾಯಿ ಇಲಾಖೆಯು ಇದರ ಅಧಿಕಾರ ನೋಡಿಕೊಳ್ಳುತ್ತಿದೆ.