ಬೆಂಗಳೂರು: ಕೊರೋನ ಅಟ್ಟಹಾಸ ಪ್ರಾರಂಭವಾದ ಕೆಲವೇ ದಿನಗಳಲ್ಲಿ ವರ್ಕ್ ಫ್ರಂ ಹೋಮ್ ಎಂಬ ಸಂಗತಿ ಪ್ರಸಿದ್ಧಿ ಪಡೆಯಿತು. ಎಲ್ಲರೂ ಮನೆಯಲ್ಲಿ ಕೂತು ತಮ್ಮ-ತಮ್ಮ ಕಂಪನಿಗಳಿಗೆ ಕೆಲಸ ಮಾಡುವುದು ಪ್ರಾರಂಭವಾಯಿತು. ಆದರೆ ಇದರಿಂದ ಅಂತರ್ಜಾಲದ ಸಮಸ್ಯೆ ಹೆಚ್ಚಾಗಿದೆ.
ಸಿಲಿಕಾನ್ ಸಿಟಿ ಯಾಗಿರುವ ಬೆಂಗಳೂರಿನಲ್ಲಿ ನೆಟ್ ವೇಗ ತಳಮಟ್ಟದಲ್ಲಿ ಇದೆ. ಇದರಿಂದ ಕೆಲಸಗಾರರ ಒತ್ತಡ ಹೆಚ್ಚಾಗಿದ್ದು, ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು ಎಲ್ಲಾ ಕಡೆಯಿಂದ ಒತ್ತಡಗಳು ಉಂಟಾಗುತ್ತಿದೆ. ಆದರೆ ಟೆಲಿಕಾಂ ಕಂಪನಿ ಈಗಾಗಲೇ 10mbps ವೇಗದಲ್ಲಿ ನೆಟ್ ನೀಡುತ್ತಿರುವುದಾಗಿ ಹೇಳಿಕೊಂಡಿದ್ದು, ಅದು ಎಷ್ಟರ ಮಟ್ಟಿಗೆ ಸತ್ಯ ಎಂಬ ಪ್ರಶ್ನೆ ಮೂಡಿ ಬರುತ್ತಿದೆ.
ಒಂದೆಡೆ ಖಾಸಗಿ ಕಂಪನಿಗಳು ಹಾಗೂ ಐಟಿ ಅಧಿಕಾರಿಗಳು ಹೈಸ್ಪೀಡ್ ಇಂಟರ್ನೆಟ್ ಈಗಾಗಿ ಪರದಾಡಿದರೆ, ಇನ್ನೊಂದೆಡೆ ಹಳ್ಳಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನು ಕೇಳಲು ಸ್ವಲ್ಪ ಪ್ರಮಾಣದ ಅಂತರ್ಜಾಲ ವ್ಯವಸ್ಥೆಗಾಗಿ ಗುಡ್ಡ, ಮರದ ತುದಿ ಅಥವಾ ಎತ್ತರದ ಪ್ರದೇಶಗಳನ್ನು ಹುಡುಕುವಂತಾಗಿದೆ.
ಒಂದೇ ಟವರ್ ನಲ್ಲಿ ಲೆಕ್ಕಕ್ಕಿಂತ ಹೆಚ್ಚು ಬಳಕೆದಾರರು ಬಳಸುತ್ತಿರುವ ಕಾರಣ ಮಲ್ಲೇಶ್ವರ, ವಿಜಯ ನಗರ, ರಾಜಾಜಿ ನಗರದಂತಹ ಪ್ರಮುಖ ಬಡಾವಣೆಗಳಲ್ಲಿಯೆ ವೇಗ ತಗ್ಗಿದೆ. ಕೆಲವೆಡೆ ಮೊಬೈಲ್ ಇಂಟರ್ನೆಟ್ ಮೆಗಾಬೈಟ್ ಪರ್ ಸೆಕೆಂಡ್ನಿಂದ (ಎಂಬಿಪಿಎಸ್) ಕಿಲೋ ಬೈಟ್ ಪರ್ ಸೆಕೆಂಡ್ಗೆ (ಕೆಬಿಪಿಎಸ್) ಇಳಿಕೆಯಾಗಿದೆ.