ಬೆಂಗಳೂರು: ಇಂಗ್ಲೆಂಡ್ ನಿಂದ ರಾಜ್ಯಕ್ಕೆ ಮರಳಿರುವ 9 ಮಂದಿಗೆ ಕೋವಿಡ್-19 ದೃಢಪಟ್ಟಿರುವುದು ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆ.
ಇಂಗ್ಲೆಂಡಿನಲ್ಲಿ ಹೊಸ ರೂಪದ ಕೋವಿಡ್-19 ಕಾಣಿಸಿಕೊಂಡಿದ್ದು, ಇದರಿಂದ ವಿಶ್ವದಾದ್ಯಂತ ಮತ್ತೆ ಕೊರೋನಾ ಭೀತಿ ಆವರಿಸಿದೆ. ಹೀಗಾಗಿ ಭಾರತ ಸಹಿತ ಹಲವು ದೇಶಗಳು ಬ್ರಿಟನ್ ಗೆ ವಿಮಾನ ಸೇವೆಯನ್ನು ರದ್ದು ಮಾಡಿವೆ.
ಇಂಗ್ಲೆಂಡ್ ನಿಂದ ಮರಳಿದವರಲ್ಲಿ ನಾಲ್ಕು ಮಂದಿ ಬೆಂಗಳೂರಿನವರು ಮತ್ತು 5 ಮಂದಿ ಶಿವಮೊಗ್ಗದವರು ಎಂದು ಅಧಿಕಾರಿಗಳು ತಿಳಿಸಿರುವರು. ಇವರ ಗಂಟಲು ದ್ರವ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇವರಿಗೆ ಹೊಸ ರೂಪದ ಕೊರೋನಾ ಸೋಂಕು ತಗುಲಿದೆಯಾ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇಂಗ್ಲೆಂಡಿನಿಂದ ಮರಳಿರುವ ಎಲ್ಲಾ ಪ್ರಯಾಣಿಕರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಹೇಳಿರುವರು.