ಹುಬ್ಬಳ್ಳಿ: ಇಂದು ಮುಂಜಾನೆಯಿಂದಲೇ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ದಾಳಿ ನಡೆದಿದೆ. ಈ ವೇಳೆ ನಗದು, ಚಿನ್ನಾಭರಣ ಸೇರಿದಂತೆ ಹಲವು ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಲಕ್ಷಾಂತರ ರೂ. ನಗದು, ಚಿನ್ನಾಭರಣಗಳು ಹುಬ್ಬಳ್ಳಿಯ ನೀರಾವರಿ ಇಲಾಖೆ ದೇವರಾಜ ಶಿಗ್ಗಾಂವಿ ಅವರ ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಪತ್ತೆಯಾಗಿದೆ ಎಂದು ವರದಿಗಳು ತಿಳಿಸುತ್ತವೆ. ಅವರ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಲಾಕರ್ ನಲ್ಲಿ 500ರೂ. ಮುಖಬೆಲೆಯ 56.50 ಲಕ್ಷ ರೂ. ನಗದು ಹಾಗೂ ಅರ್ಧ ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಪತ್ನಿ, ಅಳಿಯನ ಹೆಸರಿನಲ್ಲಿ ಬ್ಯಾಂಕ್ ಲಾಕರ್ ಹೊಂದಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ನೊಂದೆಡೆ, ಬಳ್ಳಾರಿಯಲ್ಲಿ ವಿಮ್ಸ್ ಮಾಜಿ ನಿರ್ದೇಶಕ ಶ್ರೀನಿವಾಸ ಮನೆ ಮೇಲೂ ಎಸಿಬಿ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವಿಮ್ಸ್ ನಿರ್ದೇಶಕರಾಗಿ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದ್ದ ಶ್ರೀನಿವಾಸ ಅವರು, ಸದ್ಯ ಕೊಪ್ಪಳದ ಔಷಧ ವಿಭಾಗದ ಹೆಚ್.ಓ. ಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.