News Kannada
Wednesday, December 07 2022

ಬೆಂಗಳೂರು ನಗರ

ಸರ್ವಪಕ್ಷ ಸಭೆ ಮುಂದೂಡಿಕೆ ಬೆನ್ನಲ್ಲೇ ಇಂದು ಜಿಲ್ಲಾಧಿಕಾರಿಗಳೊಂದಿಗೆ ಸರ್ಕಾರದ ಸಮಾಲೋಚನೆ

Photo Credit :

ಸರ್ವಪಕ್ಷ ಸಭೆ ಮುಂದೂಡಿಕೆ ಬೆನ್ನಲ್ಲೇ ಇಂದು ಜಿಲ್ಲಾಧಿಕಾರಿಗಳೊಂದಿಗೆ ಸರ್ಕಾರದ ಸಮಾಲೋಚನೆ

ಬೆಂಗಳೂರು: ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಭಾನುವಾರ ನಡೆಯಬೇಕಿದ್ದ ಸರ್ವಪಕ್ಷಗಳ ಸಭೆ ಮುಂದೂಡಿಕೆಯಾಗಿದೆ. ಆದರೆ, ಇಂದು ಸಿಎಂ ಅನುಪಸ್ಥಿತಿಯಲ್ಲಿ ಸರ್ಕಾರದ ಹಿರಿಯ ಸಚಿವರು ಎಲ್ಲಾ ಜಿಲ್ಲೆಗಳ ಡಿಸಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಜಿಲ್ಲಾಧಿಕಾರಿಗಳ ಜೊತೆ ಕೋವಿಡ್ ಎರಡನೇ ಅಲೆ ಸಂಬಂಧ ಅಭಿಪ್ರಾಯ ಕಲೆಹಾಕಿದ್ದಾರೆ. ಜಿಲ್ಲೆಗಳಲ್ಲಿ ಏನೇನು ಬಿಗಿಕ್ರಮ ಮಾಡಬಹುದು ಎಂಬುದನ್ನು ಈ ಸಭೆಯಲ್ಲಿ ಸಮಾಲೋಚಿಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ವಿಕಾಸಸೌಧದಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಲಿರುವ ಈ ಸಭೆಯಲ್ಲಿ ಸಂಗ್ರಹಿಸಲಾದ ಅಭಿಪ್ರಾಯಗಳನ್ನ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡುವ ಸಾಧ್ಯತೆ ಇದೆ. ಆ ಸಭೆಯಲ್ಲಿ ವಿಪಕ್ಷಗಳ ಅಭಿಪ್ರಾಯ ಇತ್ಯಾದಿಯನ್ನ ಪರಿಗಣಿಸಿ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನ ನಿರ್ಧರಿಸಲಿದೆ ಎಂದು ಮೂಲಗಳು ಹೇಳುತ್ತಿವೆ.
ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಸಭೆ ಬಳಿಕ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಕೇಂದ್ರ ಆರೋಗ್ಯ ಸಚಿವರೊಂದಿಗೆ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶಾದ್ಯಂತ ಕೋವಿಡ್ ಎರಡನೇ ಅಲೆ ಎದುರಿಸಲು ವಿವಿಧ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಸಚಿವ ಹರ್ಷ್ ವರ್ಧನ್ ಅವರು ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ 11:30ಕ್ಕೆ ಸುಧಾಕರ್ ಅವರು ಈ ವಿಡಿಯೋ ಕಾನ್ಫೆರೆನ್ಸ್​ಲ್ಲಿ ಭಾಗಹಿಸಲಿದ್ದಾರೆ.
ನಿನ್ನೆ ಸಿಎಂ ಯಡಿಯೂರಪ್ಪ ಅವರಿಗೆ ಕೋವಿಡ್ ಸೋಂಕು ದೃಢಪಡುವ ಮುನ್ನ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆದಿತ್ತು. ಅಲ್ಲಿ ಪಾಲ್ಗೊಂಡಿದ್ದ ಡಾ. ಸುಧಾಕರ್ ಅವರು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಏಪ್ರಿಲ್ 18 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ. ನಂತರ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯನ್ನೂ ಸರ್ಕಾರ ಪಡೆಯಲಿದೆ ಎಂದರು. ಆದರೆ, ಯಡಿಯೂರಪ್ಪ ಅವರು ಕೋವಿಡ್ ಸೋಂಕಿಗೆ ಒಳಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಸರ್ವಪಕ್ಷ ಸಭೆಯನ್ನೂ ಮುಂದೂಡಲಾಗಿದೆ. ಭಾನುವಾರ ಬದಲು ಬೇರಾವ ದಿನ ಸಭೆ ನಡೆಯಬೇಕೆಂಬುದು ನಿನ್ನೂ ನಿರ್ಧಾರವಾಗಬೇಕಿದೆ.
ನಿನ್ನೆ ಸುಧಾಕರ್ ಮಾತನಾಡುತ್ತಾ, ರಾಜ್ಯದಲ್ಲಿ ಕೊರೋನಾಗೆ ಬೇಕಾದ ಔಷಧ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. 84 ಸಾವಿರ ರೆಮಿಡಿಸ್ವಿರ್ ಔಷಧ ಖರೀದಿಗೆ ಟೆಂಡರ್ ಕರೆಯಲಾಗಿದೆ. ಆಮ್ಲಜನಕ ಕೊರತೆಯಾಗದಂತೆ ಈಗಾಗಲೇ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಕ್ಕೆ ಟೆಂಡರ್ ಕರೆದಿದ್ದು, ಜಿಲ್ಲಾ ಮಟ್ಟದಲ್ಲೂ ಆಕ್ಸಿಜನ್ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು.ಎರಡನೇ ಅಲೆಯ ಸಂದರ್ಭದಲ್ಲಿ ಶೇ.95 ರಷ್ಟು ಮಂದಿಗೆ ಕಡಿಮೆ ಲಕ್ಷಣ ಇರುತ್ತದೆ. ಶೇ.5 ರಷ್ಟು ರೋಗಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಿರುತ್ತದೆ. ಆದ್ದರಿಂದ ಸೋಂಕಿನ ತೀವ್ರ ಸ್ವರೂಪದ ಲಕ್ಷಣ ಇದ್ದವರು ಮಾತ್ರ ಆಸ್ಪತ್ರೆಗೆ ಬರಬೇಕು. ಪ್ರತ್ಯೇಕವಾಗಿರಲು ವ್ಯವಸ್ಥೆ ಮಾಡಲು ಖಾಸಗಿ ಆಸ್ಪತ್ರೆಗಳು ಹೋಟೆಲ್​ಗಳ ಸಹಯೋಗದಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.
:ಕೋವಿಡ್ ಪರೀಕ್ಷೆ ವರದಿ ಬಹಳ ತಡವಾಗಿ ದೊರೆಯುತ್ತಿರುವುದು ತಿಳಿದಿದೆ. ವರದಿಯನ್ನು 24 ಗಂಟೆಯೊಳಗೆ ನೀಡಬೇಕೆಂದು ಸೂಚಿಸಲಾಗಿದೆ. ಅನಗತ್ಯವಾಗಿ ಗುಂಪು ಸೇರುವುದಕ್ಕೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿಸಲಾಗಿದೆ. ಹಾಸಿಗೆ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್​ಗೆ ತಲಾ ಒಂದರಂತೆ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಐಸೋಲೇಷನ್ ನಲ್ಲಿರುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಕ್ವಾರಂಟೈನ್ ನಲ್ಲಿರುವವರ ಕೈಗೆ ಮುದ್ರೆ ಹಾಕಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ತಾತ್ಕಾಲಿಕ ನೇಮಕ ಮಾಡಲಾಗುತ್ತಿದೆ. ಫ್ರಂಟ್ ಲೈನ್ ವಾರಿಯರ್ಸ್ ಗಾಗಿ ನೇರ ನೇಮಕಾತಿ ಮಾಡಲಾಗುತ್ತಿದೆ. 6 ತಿಂಗಳ ಮಟ್ಟಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಸೋಂಕಿತರ ಅಂತ್ಯಕ್ರಿಯೆಗೆ ಹಣ ಪಡೆಯುವಂತಿಲ್ಲ. ಉಚಿತ 49 ಶ್ರದ್ಧಾಂಜಲಿ ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಕೆ ಸುಧಾಕರ್ ತಿಳಿಸಿದರು.
ಸಭೆಯ ಇತರೆ ಅಂಶಗಳು:
* ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,000, ಸರ್ಕಾರಿ ಆಸ್ಪತ್ರೆಗಳಲ್ಲಿ 1,000, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆ ಕೋವಿಡ್​ಗೆ ಮೀಸಲು.
* 5,000 ಆಕ್ಸಿಜನ್ ಸಿಲಿಂಡರ್​ಗೆ ಕೇಂದ್ರ ಸರ್ಕಾರಕ್ಕೆ ಮನವಿ.
* ಕಂಟೈನ್ಮೆಂಟ್ ಮತ್ತು ಮೈಕ್ರೋ ಕಂಟೈನ್ಮೆಂಟ್ ವಲಯ ನಿಯಮ ಕಟ್ಟುನಿಟ್ಟಾಗಿ ಜಾರಿ.
* 108 ಸೇರಿದಂತೆ ಅಗತ್ಯ ಆಂಬ್ಯುಲೆನ್ಸ್ ಗಳನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲಿ ಲಭ್ಯವಾಗಿಸುವುದು.
* ಬೆಂಗಳೂರು ನಗರದಲ್ಲಿ ಒಟ್ಟಾರೆಯಾಗಿ 400 ಆಂಬ್ಯುಲೆನ್ಸ್ ನಿಗದಿ.

See also  ಸರ್ಕಾರ ತಕ್ಷಣ ಅಧಿವೇಶನ ನಡೆಸಬೇಕು: ಕೆ.ಎಸ್.ಈಶ್ವರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು