ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ವ್ಯವಸ್ಥಿತವಾಗಿ ಅಂಬೇಡ್ಕರ್ ಅವರನ್ನು ಸೋಲಿಸುವ ಮೂಲಕ ಅವರಿಗೆ ಅಪಮಾನ ಎಸಗಿದೆ ಎಂದು ಚಲನಚಿತ್ರ ನಿರ್ದೇಶಕ ಪ್ರಕಾಶ್ ಬೆಳವಾಡಿ ಹೇಳಿದರು.
ಭಾನುವಾರ ಅಖಿಲ ಭಾರತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅವಿತಿಟ್ಟ ಅಂಬೇಡ್ಕರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಅಸ್ಪೃಶ್ಯ ಎಂಬ ಪದ ಕೇಳಲು ಸಾಧ್ಯವಾಗುತ್ತಿರಲಿಲ್ಲ. ವಿಪರ್ಯಾಸವೆಂದರೆ ಇಂದು ಅಂಬೇಡ್ಕರ್ ವಿಷಯವೇ ಅಸ್ಪೃಶ್ಯವಾಗಿ ಬಿಟ್ಟಿದೆ ಎಂದರು.
ಅಂಬೇಡ್ಕರ್ ಚುನಾವಣೆಯಲ್ಲಿ ಗೆದ್ದರೆ ದಲಿತರು ಮುಂದೆ ಬರುತ್ತಾರೆಂಬ ಭಯ ಕಾಂಗ್ರೆಸ್ಸಿಗೆ ಇತ್ತು. ಅದಕ್ಕಾಗಿ ಅಂಬೇಡ್ಕರ್‌ರ ಆಪ್ತ ಸಹಾಯಕನನ್ನೇ ಅವರ ವಿರುದ್ದ ನಿಲ್ಲಿಸಿ ಅವರನ್ನು ಚುನಾವಣೆಯಲ್ಲಿ ಸೋಲಿಸಿತು ಎಂದ ಬೆಳವಾಡಿ, ಮನುಷ್ಯನಿಗೆ ಹುಟ್ಟಿನಿಂದ ಜಾತಿ ಬಂದಿಲ್ಲ. ಅಂಬೇಡ್ಕರ್ ಅವರು ಒಂದು ವರ್ಗದ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಎಲ್ಲ ವರ್ಗದ ಜನರಿಗೂ ಸಲ್ಲುತ್ತಾರೆ ಎಂದು ತಿಳಿಸಿದರು.
ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಎಲ್ಲರೂ ಅರಿತುಕೊಳ್ಳಬೇಕು. ಅಂದು ಅಂಬೇಡ್ಕರ್ ಅಪಮಾನ, ಅವಮಾನಗಳನ್ನು ಸಹಿಸಿಕೊಳ್ಳದೆ ಹೋಗಿದ್ದರೆ ದೇಶಕ್ಕೆ ಸಂವಿಧಾನ ಸಿಗುತ್ತಿರಲಿಲ್ಲ. ಎಲ್ಲರ ಮನೆಯಲ್ಲಿ ಸಂವಿಧಾನದ ಪುಸ್ತಕ ಇರಬೇಕು ಎಂದು ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಬಾಬು ಹೇಳಿದರು.
ಪುಸ್ತಕದ ಲೇಖಕ ಪ್ರವೀಣ್ ಮಾವಿನಕಾಡು ಮಾತನಾಡಿ, ಅಂಬೇಡ್ಕರ್ ಎಂಬ ವ್ಯಕ್ತಿತ್ವ ಸೂಕ್ಷ್ಮ ವಿಷಯವಾಗುತ್ತಿರುವುದು ದೌರ್ಭಾಗ್ಯದ ಸಂಗತಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಸಮಾಜಕ್ಕೆ ತಿಳಿಸಿ, ಅವರು ಎಲ್ಲರಿಗೂ ಸೇರಿದವರು ಎಂಬ ವಿಷಯವನ್ನು ತಿಳಿಸುವ ಕಾರ್ಯ ಆಗಬೇಕು ಎಂದರು.