ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಸ್.ಆರ್. ಮೋರೆ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಸ್.ಆರ್.ಮೋರೆ (82) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಕಳೆದ ಹಲವು ದಿನಗಳಿಂದ ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ನಾಲ್ಕು ಬಾರಿ ಧಾರವಾಡದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಎಸ್.ಆರ್.ಮೋರೆ ಅವರು ಬಂಗಾರಪ್ಪ ಹಾಗೂ ಧರಂಸಿಂಗ್ ಅವರ ಸರಕಾರದಲ್ಲಿ ಸಚಿವರಾಗಿದ್ದರು. ಬಂಗಾರಪ್ಪ ಸರಕಾರದಲ್ಲಿ ಸಹಕಾರಿ ಸಚಿವ ಹಾಗೂ ಧರಂಸಿಂಗ್ ಸರಕಾರದಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮೋರೆ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಿಎಂ, ಅವರೊಬ್ಬ ಸರಳ , ಸಜ್ಜನ ರಾಜಕಾರಣಿ ಆಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದರು. ರಾಜ್ಯ ರಾಜಕಾರಣ ಒಬ್ಬ ಹಿರಿಯ ರಾಜಕೀಯ ಮುತ್ಸದ್ಧಿಯನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ನೀಡಲಿ. ದೇವರು ಮೋರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.