ಬೆಂಗಳೂರು : ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಕರೆ ನೀಡಿದ್ದ ಡಿ.31ರ ಕರ್ನಾಟಕ ಬಂದ್ಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟದಲ್ಲೇ ಅಪಸ್ವರ ಕೇಳಿಬರುತ್ತಿದ್ದು, ಕರವೇ ಪ್ರವಿಣ್ ಶೆಟ್ಟಿ ಬಣ ಬಂದ್ನಿಂದ ಹಿಂದೆ ಸರಿದಿದೆ. ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಿಗೆ ಬಂದ್ ಮುಂದೂಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮನವಿ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಪ್ರವೀಣ್ ಶೆಟ್ಟಿ ನೇತೃತ್ವದ ತಂಡ, ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಮನವಿ ಮಾಡಿತು. ಬಳಿಕ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ಲೋಕಸಭಾ ಸದಸ್ಯರನ್ನು ಎಚ್ಚರಿಸುವ ಸಂಕೇತವಾಗಿ ಜಾಗಟೆ ಚಳವಳಿ ನಡೆಸಿ ಉದ್ಧವ್ ಠಾಕ್ರೆ ವಿರುದ್ಧ ಧಿಕ್ಕಾರ ಕೂಗಿ, ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವಿಣ್ ಶೆಟ್ಟಿ ಮಾತನಾಡಿ, ಬಂದ್ ಸಮಯ ಇದಲ್ಲ. ಡಿ.31ರ ಬದಲಾಗಿ ಬೇರೆ ದಿನವನ್ನು ಕನ್ನಡಪರ ಸಂಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಿಗದಿ ಮಾಡಬೇಕೆಂದು ಮನವಿ ಮಾಡಿದರು. ಎಂಇಎಸ್ ನಿಷೇಧಿಸುವಂತೆ ಸಿಎಂಗೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಆಶ್ವಾಸನೆ ನೀಡಿದ್ದಾರೆ. ಶೀಘ್ರವೇ ವಾಟಾಳ್ ನಾಗರಾಜ್ ಅವರನ್ನು ಭೇಟಿಯಾಗಿ ಬಂದ್ ಮುಂದೂಡುವಂತೆ ಕೈ ಮುಗಿದು ಮನವಿ ಮಾಡುತ್ತೇವೆ. ಕನ್ನಡಿಗರ ಹಿತದೃಷ್ಟಿಯಿಂದ, ಕರ್ನಾಟಕದ ಉದ್ಯಮಿಗಳು, ಚಿತ್ರರಂಗದ ಹಿತದೃಷ್ಟಿಯಿಂದ ವಾಟಾಳ್ ನಾಗರಾಜ್ ಮತ್ತು ಇತರ ಸಂಘಟನೆಗಳನ್ನು ಮನವೊಲಿಸುವ ಕೆಲಸ ಮಾಡುತ್ತೇನೆ ಎಂದರು.