ಬೆಂಗಳೂರು: ಕುಮಾರಸ್ವಾಮಿ ಲೇಔಟ್ನಲ್ಲಿ 46 ವರ್ಷದ ಮಹಿಳೆಯೊಬ್ಬರು ಅಪ್ಪನ ತಿಥಿ ಕಾರ್ಯ ಮಾಡುವಾಗ ದುರಂತ ಅಂತ್ಯಕಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್ನ 2ನೇ ಹಂತದ ನಿವಾಸಿ ಪರಮೇಶ್ವರಿ (46) ಮೃತಪಟ್ಟವರು. 6 ಮಂದಿ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಟುಂಬ ಸಮೇತರಾಗಿ ಕುಮಾರಸ್ವಾಮಿ ಲೇಔಟ್ನಲ್ಲಿ ಪರಮೇಶ್ವರಿ ವಾಸಿಸುತ್ತಿದ್ದು, ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪರಮೇಶ್ವರಿ ತಂದೆ ಈ ಹಿಂದೆ ಮೃತಪಟ್ಟಿದ್ದು, ಬುಧವಾರ ಅವರ ತಿಥಿ ಕಾರ್ಯಕ್ರಮ ನಡೆದಿತ್ತು.. ಕಾರ್ಯಕ್ರಮದಲ್ಲಿ ಸಂಬಂಧಿಕರು ಭಾಗಿಯಾಗಿದ್ದರು. ಅಡುಗೆ ಮಾಡಲು ಬಳಸಿದ್ದ ಗ್ಯಾಸ್ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿದೆ. ತಂದೆಯನ್ನು ಕಳೆದುಕೊಂಡ ನೋವಿನಲ್ಲೇ ಇದ್ದ ಪರಮೇಶ್ವರಿ, ಅನಿಲ ಸೋರಿಕೆಯಾಗಿರುವುದರ ಪರಿವೇ ಇಲ್ಲದೆ ಗ್ಯಾಸ್ ಆನ್ ಮಾಡಿದ್ದರು. ಆ ವೇಳೆ ಏಕಾಏಕಿ ಬೆಂಕಿಯ ಜ್ವಾಲೆ ಪರಮೇಶ್ವರಿ ಹಾಗೂ ಇತರ 6 ಮಂದಿಯ ಮೈಗೆ ತಗುಲಿ ಗಾಯಗೊಂಡಿದ್ದರು. ಚೀರಾಟ ಕೇಳಿ ಸ್ಥಳಕ್ಕೆ ಬಂದ ನೆರೆ-ಹೊರೆಯವರು 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪರಮೇಶ್ವರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಉಳಿದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ, ದುರ್ಘಟನೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪರಿಶೀಲಿಸಿ ತೆರಳಿದ್ದಾರೆ. ಕೇವಲ ಬೆಂಕಿಯ ಜ್ವಾಲೆ ಮಾತ್ರ ಕಾಣಿಸಿಕೊಂಡ ಪರಿಣಾಮ ಮನೆಯಲ್ಲಿರುವ ವಸ್ತುಗಳಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.