News Kannada
Wednesday, March 29 2023

ಬೆಂಗಳೂರು ನಗರ

ವಿಧಾನಪರಿಷತ್ ಸದಸ್ಯರಿಗೆ ಸಭಾಪತಿ ಬರೆದ ಪತ್ರದಲ್ಲೇನಿದೆ!

Photo Credit :

ಬೆಂಗಳೂರು:  ಮೇಲ್ಮನೆ ಎಂದರೆ ಅದು ಚಿಂತಕರ ಚಾವಡಿ ಇಲ್ಲಿಗೆ ಆಯ್ಕೆಯಾಗಿ ಬರುವ ಸದಸ್ಯರಿಗೆ ಗೌರವಯುತ ಸ್ಥಾನಮಾನವಿದೆ. ಇಲ್ಲಿ ನಡೆಯುವ  ಚರ್ಚೆಗಳು ಚಿಂತನೆಯ ಓರೆಗೆ ಹಚ್ಚುವಂತಿರಬೇಕು. ಆದರೆ ಕಳೆದ ಕೆಲವು ದಿನಗಳಿಂದ ಮೇಲ್ಮನೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಬೇಸರ ತಂದಿದಂತು ಸತ್ಯ.

ಈ ಕುರಿತಂತೆ ವಿಧಾನಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿರುವ ಪತ್ರ ಮನ ಮನತಟ್ಟುವಂತಿದೆ. ಹಾಗಾದರೆ ಆ ಪತ್ರದಲ್ಲಿ ಏನಿದೆ ಎಂಬುದರ ಸವಿವರ ಇಲ್ಲಿದೆ.

ವಿಧಾನ ಪರಿಷತ್ತು ಸಾಂವಿಧಾನಿಕ ತಳಹದಿಯ ಮೇಲೆ ಜನರಿಂದ ಆಯ್ಕೆಗೊಂಡು ಜನಪರವಾದ ಆಡಳಿತ ನಡೆಸುವ ಒಂದು ವಿಶಿಷ್ಟವಾದ, ವಿಭಿನ್ನವಾದ ಪರಿಪೂರ್ಣತೆಗೆ ಹತ್ತಿರವಾದ ಪರಿಕಲ್ಪನೆಯಲ್ಲಿ ರಚಿತವಾಗಿರುತ್ತದೆ. ಕರ್ನಾಟಕ ವಿಧಾನ ಪರಿಷತ್ತಿಗೆ 115 ವರ್ಷಗಳ ಶ್ರೀಮಂತ ಇತಿಹಾಸವಿದೆ. ಸಮಾಜದ ಎಲ್ಲಾ ಸ್ತರಗಳ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಗಳ ಬಗೆಗೆ ವಿಚಾರ ಮಂಥನ ನಡೆಯಬೇಕೆಂಬ ಆಶಯದಿಂದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಚುನಾಯಿತರಾಗಿ ಸೇವೆ ಸಲ್ಲಿಸಿರುತ್ತಾರೆ.

ದಿ. ಡಿ.ವಿ.ಗುಂಡಪ್ಪ (ಡಿವಿಜಿ) ಅವರಿಂದ ಹಿಡಿದು ಅನೇಕ ಪ್ರಾತಃ ಸ್ಮರಣೀಯರು ಈ ಸದನದ ಸದಸ್ಯರಾಗಿ ಆರೋಗ್ಯಕರ ಸಮಾಜವನ್ನು ಸದೃಢವಾಗಿ ರೂಪಿಸಲು ಕಟಿಬದ್ಧರಾಗಿದ್ದರಲ್ಲದೆ ಅಧ್ಯಯನ ಶೀಲರಾಗಿರುವುದರ ಮೂಲಕ ಅನುಕರಣೀಯರಾಗಿರುತ್ತಾರೆ. ಪ್ರತಿಯೊಬ್ಬರೂ ತಾವು ಪ್ರತಿನಿಧಿಸುವ ತಮ್ಮ ತಮ್ಮ ಕ್ಷೇತ್ರಗಳ ಕುಂದು-ಕೊರತೆಗಳನ್ನು ನಿವಾರಿಸಲು ಸುಧಾರಣೆಗಳನ್ನು ತರಲು ಶ್ರಮಿಸುತ್ತಿದ್ದರು. ಇಂತಹ “ಕಟ್ಟುವ ಕಾಯಕ” ಸಾಧ್ಯವಾಗುವುದು ಕೇವಲ ಆರೋಗ್ಯಕರವಾದ ಆಲಿಸುವಿಕೆ, ಚಿಂತನ ಮಂಥನಗಳು ಹಾಗೂ ಅರ್ಥ ಪೂರ್ಣ ಚರ್ಚೆಗಳಿಂದ ಎಂಬುದು ಹಿಂದಿನಿಂದಲೂ ಒಪ್ಪಿತ ಸತ್ಯವಾಗಿದೆ.

ಅದರಂತೆ ಆಯ್ಕೆಯಾಗಿ ಬಂದಿರುವ ಶಾಸಕರುಗಳು ಅಧಿವೇಶನದ ಉಪವೇಶನಗಳಿಗೆ ತಪ್ಪದೆ ಹಾಜರಾಗಿ ಸದನದಲ್ಲಿ ನಡೆಯುವ ಪ್ರಶ್ನೋತ್ತರ, ಚರ್ಚೆ ಸಂವಾದಗಳನ್ನು ಗಮನಿಸಿಕೊಳ್ಳುತ್ತಾ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳನ್ನು ಅನುಸರಿಸುವುದು ಅತ್ಯಂತ ಆಧ್ಯ ವಿಷಯವಾಗಿರುತ್ತದೆ. ತನ್ಮೂಲಕ ಹಿರಿಯರು ಕಟ್ಟಿಕೊಟ್ಟ ಬುತ್ತಿಯನ್ನು ಸಮಾಜಕ್ಕೆ ಉಣಬಡಿಸುವುದರ ಮೂಲಕ ಶತಮಾನದ ಇತಿಹಾಸವುಳ್ಳ ರಾಷ್ಟ್ರದಲ್ಲಿಯೇ ಮಾದರಿಯಾದ ನಮ್ಮ ವಿಧಾನ ಪರಿಷತ್ತಿನ ಘನತೆಯನ್ನು, ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದಂತಾಗುತ್ತದೆ.

ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ವಿಧಾನ ಪರಿಷತ್ತನ್ನು ಪ್ರವೇಶಿಸಿರುವ ತಾವುಗಳೆಲ್ಲರೂ ಜನಪರವಾದ ಕೆಲಸಗಳನ್ನು ಪೂರೈಸುವ, ಸದೃಢವಾದ ಸಮಾಜವನ್ನು ಕಟ್ಟುವ, ಬೆಳೆಸುವ ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ತಾವುಗಳು “ಅತ್ಯುತ್ತಮ ಶಾಸಕ”ರಾಗಿ ಹೊರಹೊಮ್ಮಲು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ನಡವಳಿಕೆಯ ನಿಯಮಗಳನ್ನು ಅನುಸರಿಸುವುದು, ಅಧಿವೇಶನಕ್ಕೆ ತಪ್ಪದೇ ಹಾಜರಾಗುವುದು, ಶಾಸಕರ ಗ್ರಂಥಾಲಯವನ್ನು ನಿಯಮಿತವಾಗಿ ಬಳಸಿಕೊಳ್ಳಬೇಕೆಂಬುದು ನನ್ನ ಆಶಯ.

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 303ನ್ನು ಅವಲೋಕಿಸಿದಾಗ ಶಾಸಕರುಗಳು ಸದನದಲ್ಲಿ ಉಪಸ್ಥಿತರಿದ್ದಾಗ ಪಾಲಿಸಬೇಕಾದ ನಿಯಮಗಳ ಪಾಲನೆಯಾಗದೆ ಸದನದ ಸುಗಮ ಕಾರ್ಯಕಲಾಪಗಳ ನಿರ್ವಹಣೆಗಳಿಗೆ ಅಡ್ಡಿಯನ್ನುಂಟು ಮಾಡುತ್ತಿರುವುದು ಅತ್ಯಂತ ನೋವಿನ ವಿಷಯವಾಗಿದೆ. ಆದ್ದರಿಂದ ಮಾನ್ಯ ಶಾಸಕರುಗಳು ಧರಣಿ ಸಮಯದಲ್ಲಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವುದು ಹಾಗೂ ಘೋಷಣೆಗಳನ್ನು ಕೂಗುವುದನ್ನು ಈ ಅಧಿವೇಶನದಿಂದ ನಿರ್ಬಂಧಿಸಲಾಗಿದೆ ಎಂದು ತಿಳಿಸಲು ಇಚ್ಚಿಸುತ್ತೇನೆ. ಇದಕ್ಕೆ ತಾವೆಲ್ಲರೂ ಸಹಕರಿಸುವಿರೆಂದು ನಂಬಿರುತ್ತೇನೆ.

ಕಾಲ ಸರಿದಂತೆ ಸಮಾಜದ ಎಲ್ಲಾ ಸ್ತರಗಳು ತಮ್ಮ ಮೂಲ ಆಶಯದಿಂದ ದೂರವಾಗಲು ಆರಂಭಿಸಿವೆ. ಅದಕ್ಕೆ ಪರಿಷತ್ತು ಹೊರತಾಗಿಲ್ಲವೆಂದು ಹೇಳಲು ಅತ್ಯಂತ ಸಂಕೋಚ ಹಾಗೂ ಖೇದವುಂಟಾಗುತ್ತದೆ. ಸದನದಲ್ಲಿ ನಮ್ಮೆಲ್ಲರ ಪಾಲ್ಗೊಳ್ಳುವಿಕೆ ಸಕ್ರಿಯವಾಗಿಲ್ಲದಿದ್ದರೆ ಮೇಲ್ಮನೆಯ ಘನತೆಗೆ ಕುಂದುಂಟಾಗುವುದು.

ಹಾಗಾಗಿ ಮುಂದೊಂದು ದಿನ ಪರಿತಪಿಸುವ ಬದಲು ಈಗಲೇ ಎಚ್ಚೆತ್ತುಕೊಂಡು ಪರಿಷತ್ತಿಗೆ ಹಿಂದಿನ ವೈಭವವನ್ನು ಮರಳಿ ತರಲು ಪ್ರಯತ್ನಿಸೋಣ. ಇದು ಒಬ್ಬರ ಪ್ರಯತ್ನದಿಂದ ಆಗುವಂತಹ  ಕಾರ್ಯವಲ್ಲ. 75 ಜನ ಶಾಸಕರ ಮನೋ ಸಂಕಲ್ಪದಿಂದ ಮಾತ್ರ ಇದನ್ನು ಸಾಧ್ಯವಾಗಿಸಬೇಕಾಗಿದೆ.

ಈ ನಿಟ್ಟಿನಲ್ಲಿ ತಾವೆಲ್ಲರೂ ಸದನ ನಡೆಯುವ ವೇಳೆಯಲ್ಲಿ  ಸಂಪೂರ್ಣವಾಗಿ  ಉಪಸ್ಥಿತರಿರಬೇಕೆಂಬ ಆಶಯದಿಂದ ತಾವು ಹಾಜರಿದ್ದು ಸಮಯದ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ಅರ್ಥಪೂರ್ಣ,  ಸತ್ವಪೂರ್ಣ ಚರ್ಚೆಯು ನಡೆಯಲು ಅನುವಾಗುವಂತೆ, ವಿಧಾನ ಪರಿಷತ್ತಿನ ವೈಭವವನ್ನು ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ, ಬೆಳಸುವಲ್ಲಿ ಮೇಲೆ ತಿಳಿಸಿರುವ ಕ್ರಮವನ್ನು ಪರಿಚಯಿಸಲು ಉದ್ದೇಶಿಸಿದ್ದು, ತಮ್ಮ ಸಹಕಾರವನ್ನು ಬಯಸಿರುವುದಾಗಿ ಪತ್ರದಲ್ಲಿ  ತಿಳಿಸಿದ್ದಾರೆ.

See also  5 ವರ್ಷದ ಮಗುವಿಗೆ ಚಿಂತ್ರಹಿಂಸೆ ನೀಡಿ ಕ್ರೌರ್ಯ ಮೆರೆದ ದತ್ತು ತಂದೆ-ತಾಯಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು