ಬೆಂಗಳೂರು: ಕೋವಿಡ್ -19 ಸೇರಿದಂತೆ ತುರ್ತು ಆರೋಗ್ಯ ಸಂಬಂಧಿ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ -ಐ.ಐ.ಎಚ್.ಆರ್.ಎಂ ನಿಂದ ಆಸ್ಪತ್ರೆಗಳು ಮತ್ತು ಆರೋಗ್ಯ ನಿರ್ವಹಣೆ ಕುರಿತ ಎರಡು ವರ್ಷಗಳ ಪೂರ್ಣ ಪ್ರಮಾಣದ ಸ್ನಾತಕೋತ್ತರ ಕೋರ್ಸ್ ಆರಂಭವಾಗಿದೆ.
ಹೊಸ ಕೋರ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಐ.ಐ.ಎಚ್.ಆರ್ ನ ನಿರ್ದೇಶಕಿ ಡಾ. ಉಷಾ ಮಂಜುನಾಥ್, ಯುವ ವೈದ್ಯಕೀಯ ಸಮೂಹವನ್ನು ತುರ್ತು ಆರೋಗ್ಯ ಪರಿಸ್ಥಿತಿಗಳಿಗೆ ಸಜ್ಜುಗೊಳಿಸಲು ಸ್ನಾತಕೋತ್ತರ ಕೋರ್ಸ್ ನೆರವಾಗಲಿದೆ. ನೂತನ ಕೋರ್ಸ್ ಗೆ ಎಐಸಿಟಿಇ, ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಷನ್ ನಿಂದ ಅನುಮೋದನೆ ದೊರೆತಿದೆ. ಜಾಗತಿಕ ಮಟ್ಟದ ಮಾಂಚೆಸ್ಟರ್ ವಿ.ವಿ, ಮೈಸೂರು ವಿ.ವಿ, ನಾರಾಯಣ ಹೃದಯಾಲಯ ಸೇರಿದಂತೆ ಹಲವು ವಿವಿಗಳು, ಆಸ್ಪತ್ರೆಗಳ ಸಹಯೋಗದಲ್ಲಿ ಹೊಸ ಕೋರ್ಸ್ ಗೆ ಪಠ್ಯ ಕ್ರಮ ಸಿದ್ಧಪಡಿಸಲಾಗಿದೆ ಎಂದರು.
ದೇಶ ಎದುರಿಸುತ್ತಿರುವ ಆರೋಗ್ಯ ಮೂಲ ಸೌಕರ್ಯದ ಕೊರತೆಯನ್ನು ಕೋವಿಡ್ ಸಾಂಕ್ರಾಮಿಕ ಅನಾವರಣಗೊಳಿಸಿದ್ದು, 1.5 ಲಕ್ಷ ದಾದಿಯರು, 50 ಸಾವಿರಕ್ಕೂ ಹೆಚ್ಚು ವೈದ್ಯರ ಕೊರತೆ ಇರುವುದು ಸಾಬೀತಾಗಿದೆ. ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ, ವ್ಯವಹಾರ ಮಾದರಿಗಳಿಗೆ ಅನುಗುಣವಾಗಿ ಆರೋಗ್ಯ ಸಂಸ್ಥೆಗಳನ್ನು ಸಮರ್ಥವಾಗಿ ನಿಭಾಯಿಸುವ ಕುಶಲತೆ ರೂಢಿಸಿಕೊಳ್ಳಬೇಕಾಗಿದೆ ಎಂದರು.
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಹ ವೃತ್ತಿಪರರ ಕೊರತೆ ಇದ್ದು, ರಾಜ್ಯ ಮತ್ತು ದೇಶ ತುರ್ತು ಪರಿಸ್ಥಿತಿಗಳಿಗೆ ಸನ್ನದ್ಧಗೊಳ್ಳಬೇಕಾಗಿದೆ. 10 ಲಕ್ಷ ಮಂದಿಗೆ ಒಂದು ಜಿಲ್ಲಾಸ್ಪತ್ರೆಯಿದ್ದು, 1.5 ಲಕ್ಷ ಜನರಿಗೆ ಒಂದು ತಾಲ್ಲೂಕು ಆಸ್ಪತ್ರೆ ಮಾತ್ರ ಇವೆ. ಕರ್ನಾಟಕದಲ್ಲಿ ಆರೋಗ್ಯ ಮೂಲ ಸೌಕರ್ಯ ಬಹುದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರು ನಗರವನ್ನು ಜಗತ್ತಿನ ಪ್ರಮುಖ ಆರೋಗ್ಯ ಪ್ರವಾಸಿ ತಾಣ ಎಂದು ಗುರುತಿಸಿದ್ದು, ಅತಿ ಹೆಚ್ಚು ಯೂನಿಕಾರ್ನ್ ಗಳನ್ನು ಒಳಗೊಂಡಿರುವ ಈ ನಗರದಲ್ಲಿ ಆರೋಗ್ಯ ಮಾನವ ಸಂಪನ್ಮೂಲ ಹೆಚ್ಚಿಸುವುದು ಇಂದಿನ ಅಗತ್ವವಾಗಿದೆ ಎಂದು ಡಾ. ಡಾ. ಉಷಾ ಮಂಜುನಾಥ್ ಹೇಳಿದರು.
ಕಾರ್ಯಕ್ರಮದಲ್ಲಿ ಐಐಎಚ್ಎಂಆರ್ ನ ಡೀನ್, ತರಬೇತಿ ವಿಭಾಗದ ಡೀನ್ ಪ್ರಿಯಾಂಕ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.