News Kannada
Tuesday, March 21 2023

ಬೆಂಗಳೂರು ನಗರ

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಪ್ರಶ್ನೆಗಳ ಸುರಿಮಳೆ ಗೈದ ಸಿದ್ದರಾಮಯ್ಯ

Bengaluru: Bjp government was formed by unethical means, says Siddaramaiah
Photo Credit : Facebook

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ ನೀಡಿದ್ದು, ರಾಜ್ಯಕ್ಕೆ ಆಗಮಿಸುತ್ತಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನಿಮಗೆ ತುಂಬು ಹೃದಯದ ಸ್ವಾಗತ. ಮುಂದಿನ ದಿನಗಳಲ್ಲಾದರೂ ಒಂದಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ನೀವು ಬರುತ್ತಿದ್ದೀರಿ ಎಂದು ಜಾಹಿರಾತುಗಳ ಮೂಲಕ ತಿಳಿದಿದ್ದೇನೆ ಎಂದರು.

ಇದು ಚುನಾವಣಾ ವರ್ಷ ಆಗಿರುವುದರಿಂದ ನೀವು ಮತ್ತೆ ಅಭಿವೃದ್ಧಿಯ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿರಬಹುದು. ಆದರೆ, ಕಳೆದ ಮೂರು ವರ್ಷಗಳಿಂದ ರಾಜ್ಯ ನಿರಂತರವಾಗಿ ಪ್ರವಾಹ ಮತ್ತು ಮಳೆ ಅನಾಹುತಗಳಿಗೆ ತುತ್ತಾಗುತ್ತಲೇ ಇದೆ. ಒಮ್ಮೆಯಾದರೂ ಬಂದು ನಾಡಿನ ಸಂಕಷ್ಟ ಕೇಳಿ ಎಂದು ಹತ್ತಾರು ಬಾರಿ ವಿನಂತಿಸಿದರೂ ನೀವು ಅದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಕರ್ನಾಟಕ ಒಕ್ಕೂಟ ಸರ್ಕಾರದ ಸದಸ್ಯ ರಾಜ್ಯ ಎನ್ನುವುದನ್ನೂ ಮರೆತಂತೆ ಇದ್ದುಬಿಟ್ಟಿರಿ. ಈಗ ಚುನಾವಣೆ ಹತ್ತಿರ ಬಂದಿರುವುದರಿಂದ ನೀವು ರಾಜ್ಯಕ್ಕೆ ಭೇಟಿ ನೀಡಲು ನೆಪಗಳಿಗಾಗಿ ತಡಕಾಡುತ್ತೀದ್ದೀರಿ. ಆದರೆ, ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀವೇ ಬಹಳ ಸಂಭ್ರಮದಿಂದ ಬಿಡುಗಡೆಗೊಳಿಸಿದ ನಿಮ್ಮದೇ ಪಕ್ಷದ ಪ್ರಣಾಳಿಕೆಯಲ್ಲಿ ಕರಾವಳಿ ಜಿಲ್ಲೆಗಳ ಜನತೆಗೆ ನೀವು ನೀಡಿದ್ದ ಭರವಸೆಗಳನ್ನು ನೀವು ಮರೆತಿರಬಹುದು. ಆದರೆ ಕರಾವಳಿಯ ಜನ ಅದನ್ನು ಮರೆಯಲು ಸಾಧ್ಯವಿಲ್ಲ. ನಿಮಗೆ ಇಂತಹ ಜಾಣ ಮರೆವು ಚೆನ್ನಾಗಿದೆ ಎನ್ನುವ ಕಾರಣಕ್ಕೇ ನಾನು ನೆನಪಿಸತ್ತಿದ್ದೇನೆ.

ಸದ್ಯ ನೀವು ನಿಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ 34 ಭರವಸೆಗಳಲ್ಲಿ ಆಯ್ದ 25 ಭರವಸೆಗಳ ಪಟ್ಟಿಯನ್ನು ನಿಮಗೆ ನೆನಪಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಇವುಗಳಲ್ಲಿ ಎಷ್ಟನ್ನು ಈಡೇರಿಸಿದ್ದೀರಿ? ಈಡೇರಿಸದಿದ್ದರೆ ಯಾವಾಗ ಈಡೇರಿಸುತ್ತೀರಿ ಹೇಳಿ.

1. ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಕಚೇರಿಯನ್ನು ತೆರೆಯಲು ಕೇಂದ್ರ ಸರ್ಕಾರದ ಜತೆ ಪ್ರಯತ್ನಿಸಲಾಗುವುದು ಎಂದಿದ್ದಿರಿ. ಪೂರ್ಣ ಪ್ರಮಾಣದ ಕಚೇರಿ ಸಮರ್ಪಕವಾಗಿ ಯಾವತ್ತಿನಿಂದ ಕೆಲಸ ಶುರು ಮಾಡುತ್ತದೆ ಹೇಳಿ?

2. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಮತ್ತು ಉಡುಪಿಯಲ್ಲಿ 1 ಸಣ್ಣ ಪ್ರಮಾಣದ ಗೋಡಂಬಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಡಂಬಿ ಇಂಟೆನ್ಸೀವ್ ಡೆವಲಪ್‍ಮೆಂಟ್ ಮಿಷನ್ ಆರಂಭಿಸಲಾಗುವುದು ಎಂದಿದ್ದಿರಿ ? ಯಾವಾಗ ಸ್ವಾಮಿ ? ಕನಿಷ್ಠ ಶಂಕು ಸ್ಥಾಪನೆಯನ್ನಾದರೂ ಮಾಡಿದ್ದೀರಾ?

3. ಹೊನ್ನಾವರವನ್ನು ಗೋಡಂಬಿ ವಿಶೇಷ ರಫ್ತು ವಲಯವನ್ನಾಗಿ ರೂಪಿಸಲಾಗುವುದು ಎಂದಿದ್ದಿರಿ. ರೂಪಿಸಿದಿರಾ?

4. ಗೋಡಂಬಿ ಬೆಳೆಗಾರರು ಮತ್ತು ಕಾರ್ಮಿಕರು ಮತ್ತು ಇವರ ಕುಟುಂಬಗಳಿಗಾಗಿ ಕೇಂದ್ರ ಸರ್ಕಾರದ ಜತೆ ವ್ಯವಹರಿಸಿ ಇಎಸ್‍ಐ ಆಸ್ಪತ್ರೆ ತೆರೆಯಲಾಗುವುದು ಎನ್ನುವ ನಿಮ್ಮ ಭರವಸೆ ಮಣ್ಣಾಗಿ ಹೋಗಿದೆಯಲ್ಲಾ ಏಕೆ? ಇದಕ್ಕಾದರೂ ಗುದ್ದಲಿ ಪೂಜೆ ಮಾಡುವಿರಾ?

5. ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ಇಂಧನ ಸಬ್ಸಿಡಿ ಪ್ರಮಾಣವನ್ನು ವರ್ಷಕ್ಕೆ 1,80,000 ಲೀಟರ್‍ಗೆ ಹೆಚ್ಚಿಸಲಾಗುವುದು ಎಂದಿದ್ದಿರಿ. ಯವ ಪ್ರಮಾಣದಲ್ಲಿ ಹೆಚ್ಚಿಸಿದ್ದೀರಿ ಹೇಳಿ?

6. ಪ್ರತಿವರ್ಷ 400 ಲೀಟರ್ ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಮೀನುಗಾರರಿಗೆ ಒದಗಿಸಲಾಗುವುದು ಎಂದಿರಿ. ಒದಗಿಸಿದಿರಾ?

7. ಮೀನುಗಾರಿಕೆಯನ್ನು ಪ್ರೋತ್ಸಾಹಿಸುವುದು, ಮೋಟಾರ್ ಬೋಟ್‍ಗಳು ಮತ್ತಿತರ ಸಲಕರಣೆಗಳ ಖರೀದಿಗೆ ಬಡ್ಡಿರಹಿತ ಸಾಲವನ್ನು ಒದಗಿಸಲಾಗುವುದು ಎಂದು ಆಕಾಶ ತೋರಿಸಿದಿರಿ. ಒದಗಿಸಿದಿರಾ?

8. ಅಳಿವೆ ಬಾಗಿಲು, ಹಂಗಾರ್ ಕಟ್ಟೆ, ಕುಂದಾಪುರ, ಭಟ್ಕಳ ಕೊಲ್ಲಿಗಳ ನವೀಕರಣಕ್ಕಾಗಿ ರೂ.135 ಕೋಟಿ ಯಾವಾಗ ಕೊಡುತ್ತೀರಿ?

See also  ರಾಷ್ಟ್ರ ಧ್ವಜದ ಹರಿಕಾರ ಪಿಂಗಲಿ ವೆಂಕಯ್ಯ

9. ಪ್ರತಿ ಮೀನುಗಾರರ ಸಂಘಕ್ಕೆ ರೂ.2 ಲಕ್ಷ ಸಹಾಯದನ ಕೊಡುವುದಾಗಿ ಹೇಳಿದ್ದಿರಿ. ಎಷ್ಟು ಕುಟುಂಬಗಳಿಗೆ ನಿಮ್ಮ ಸಹಾಯದನ ತಲುಪಿದೆ?

10. ಒಳನಾಡು ಮೀನುಗಾರರಿಗೆ ಫೈಬರ್ ಗ್ಲಾಸ್ ಮತ್ತು ಉನ್ನತೀಕರಿಸಿದ ಸೀಡ್‍ಗಳನ್ನು ಖರೀದಿಸಲು ರೂ.35 ಕೋಟಿ ಕಾರ್ಪಸ್ ನಿಧಿ ಇರಿಸುವುದಾಗಿ ಹೇಳಿದ್ದಿರಿ. ಎಲ್ಲಿ ಈ ಹಣ?

11. ಸ್ಟೇಟ್ ಫಿಶರೀಸ್ ಇನ್ವೆಸ್ಟ್‍ಮೆಂಟ್ ಬೋರ್ಡ್ ರಚಿಸಿ ಮೀನುಗಾರಿಕೆ ವಲಯಕ್ಕೆ ಬಂಡವಾಳ ಆಕರ್ಷಿಸಲಾಗುವುದು ಎಂದಿದ್ದಿರಿ. ಭರವಸೆ ಈಡೇರುವುದು ಯಾವಾಗ?

12. ರಾಜ್ಯಾದ್ಯಂತ ಎಲ್ಲಾ ಮೀನುಗಾರರ ಕಾಲನಿಗಳಲ್ಲಿ ಡಾಕ್ ಬೋಟ್ ಶೆಲ್ಟರ್‍ಗಳನ್ನು ನಿರ್ಮಿಸಲಾಗುವುದು, ನಾಪತ್ತೆಯಾದ ಮೀನುಗಾರರ ಮರಣ ಪ್ರಮಾಣ ಪತ್ರವನ್ನು ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು. ಮೋಟಾರ್ ಸೈಕಲ್ ಐಸ್ ಬಾಕ್ಸ್‌ ಗಳನ್ನು ಶೇ.70 ರ ಸಬ್ಸಿಡಿ ದರದಲ್ಲಿ ಮೀನುಗಾರರಿಗೆ ಒದಗಿಸಲಾಗುವುದು. ನವ ಮತ್ಸ್ಯ ಆಶ್ರಯ ಯೋಜನೆ” ಅಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ರೂ.40 ಕೋಟಿ ನೀಡಲಾಗುವುದು ಎಂದು ಅಂಗೈಯಲ್ಲೇ ನಕ್ಷತ್ರ ತೋರಿಸಿದಿರಿ. ಏನಾಯ್ತು ನಿಮ್ಮ ಈ ಭರವಸೆಗಳೆಲ್ಲಾ?

13. ಸ್ಥಳೀಯ ಮೀನುಗಾರ ಮಹಿಳೆಯರಿಂದ ನಿರ್ವಹಿಸಲ್ಪಡುವ 100 ಹವಾನಿಯಂತ್ರಿತ ಮೀನು ಮಾರಾಟ ಮಳಿಗೆಗಳ ನಿರ್ಮಾಣಕ್ಕೆ ರೂ.20 ಕೋಟಿ ಬಿಡುಗಡೆ ಮಾಡಲಾಗುವುದು ಎಂದಿರಿ. ಮಾಡಿದಿರಾ?

14. ರಾಜ್ಯದಲ್ಲಿ ಕೋಮುವೈಷಮ್ಯ ಹರಡಿಸುತ್ತಿರುವ ಪಿಎಫ್‍ಐ ಮತ್ತು ಕೆಎಫ್‍ಡಿ ಯನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎನ್ನುವುದು ನಿಮ್ಮ ಪ್ರಣಾಳಿಕೆಯಲ್ಲಿನ ಭರವಸೆಯಾಗಿತ್ತು. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಬಂದಿದೆಯೇ? ಬಂದಿದ್ದರೆ ಇದುವರೆಗೂ ಏಕೆ ನಿಷೇಧ ಮಾಡಿಲ್ಲ ?

15. ಅಟಲ್ ಪೆನ್ಷನ್ ಯೋಜನೆಗೆ ಮೀನುಗಾರರನ್ನು ಅಭಿಯಾನ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗುವುದು ಎಂದಿರಿ. ಎಷ್ಟು ನೋಂದಣಿ ಮಾಡಿದಿರಿ? ಎಷ್ಟು ಮೀನುಗಾರರಿಗೆ ಪೆನ್ಷನ್ ತಲುಪಿದೆ ಎನ್ನುವ ಲೆಕ್ಕ ಕೊಡಿ?

16. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನಿನ ತ್ಯಾಜ್ಯದಿಂದ ಬಯೋಗ್ಯಾಸ್ ಪ್ಲಾಂಟ್‍ಗಳನ್ನು ನಿರ್ಮಿಸಲಾಗುವುದು ಎಂದಿರಿ. ನಿರ್ಮಿಸಿದಿರಾ?

17. ನೈಸರ್ಗಿಕ ದುರಂತಕ್ಕೆ ಬಲಿಯಾದ ಮೀನುಗಾರ ಕುಟುಂಬಗಳಿಗೆ ವಿಕೋಪ ಪರಿಹಾರ ನಿಧಿಯಲ್ಲಿ ಪರಿಹಾರ ಒದಗಿಸಲಾಗುವುದು, ಮೀನುಗಾರಿಕೆ ಸಾಧ್ಯವಾಗದ ಮತ್ತು ಮೀನು ಮಾರಾಟ ಸಾಧ್ಯವಾಗದ ದಿನಗಳಲ್ಲಿ ದಿನಕ್ಕೆ ರೂ.1800 ನ್ನು ವಿತರಿಸಲಾಗುವುದು ಎನ್ನುವ ಬಣ್ಣದ ಭರವಸೆ ಏನಾಯ್ತು?

18. ಸುರತ್ಕಲ್‍ನಲ್ಲಿ ಪೆಟ್ರೋಲಿಯಂ ಮತ್ತು ಇಂಧನ ಅಧ್ಯಯನ ವಿಶ್ವವಿದ್ಯಾಲಯ ತೆರೆಯಲಾಗುವುದು,
ರಾಜ್ಯದ ಕರಾವಳಿ ಪ್ರದೇಶದಲ್ಲಿ ಎರಡು “ಮೀನುಗಾರಿಕೆ ವಿಜ್ಞಾನ ಕಾಲೇಜು’ ತೆರೆಯಲಾಗುವುದು ಎಂದಿರಿ. ಒಂದನ್ನಾದರೂ ತೆರೆದಿರಾ?

19. ಅಕ್ವಾಕಲ್ಚರ್ ಮತ್ತು ಮೀನು ಕೃಷಿಗೆ ಅನುಕೂಲ ಆಗುವಂತೆ ಉಪಗ್ರಹ ಮ್ಯಾಪಿಂಗ್ ಮಾಡುವ ಡಿಜಿಟಲ್ ತಂತ್ರಜ್ಞಾನವನ್ನು ಉತ್ತೇಜಿಸಲಾಗುವುದು. ಮ್ಯಾಪಿಂಗ್ ಶುರುವಾಗಿದೆಯಾ?

20. ಕೋಮುವಾದಿ ಪ್ರೇರೇಪಿತ ಕೊಲೆಗಳ ತ್ವರಿತ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ವಿಶೇಷ ತನಿಖಾ ತಂಡ (ಎಸ್‍ಐಟಿ) ಮತ್ತು ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುವುದು ಎಂದಿರಿ. ಮಾಡಿದಿರಾ?

21. ಹಾಸನವನ್ನು ಮಂಗಳೂರು ಜತೆ ಸಂಪರ್ಕಿಸುವ ಶಿರಾಡಿ ಘಾಟ್ ಸುರಂಗ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಸಾಮಥ್ರ್ಯ ದ ಕೊರತೆಯನ್ನು ಸರಿದೂಗಿಸಲು ಮಂಗಳೂರು ವಿಮಾನ ನಿಲ್ದಾಣದ ರನ್ ವೇಯನ್ನು ಉನ್ನತೀಕರಣಗೊಳಿಸಲಾಗುವುದು ಎಂದಿರಿ. ಇವೆಲ್ಲಾ ಸಮರ್ಪಕವಾಗಿ ಆಗಿವೆಯಾ?

22. ಮನಮೋಹಕ ಬೀಚ್‍ಗಳು, ದ್ವೀಪಗಳು, ಸುರತ್ಕಲ್ ನಂತಹ ಡೈವಿಂಗ್ ತಾಣಗಳು, ಕಾಪು, ಸೇಂಟ್ ಮೇರಿಸ್ ದ್ವೀಪಗಳು, ಮುಲ್ಕಿ, ಪಣಂಬೂರು, ಗೋಕರ್ಣ, ಮಲ್ಪೆ, ಮುರ್ಡೇಶ್ವರ ಮುಂತಾದ ಪ್ರಮುಖ ಕರಾವಳಿ ತಾಣಗಳ ಅಭಿವೃದ್ಧಿಗಾಗಿ ದೇಶದೊಳಗಿನ ಹಾಗೂ ಹೊರಗಿನ ಆತಿಥ್ಯ ವಲಯದ ಸಂಸ್ಥೆಗಳ ಜೊತೆ ಕೆಎಸ್‍ಟಿಡಿಸಿಯ ಸಹಭಾಗಿತ್ವ ಪಡೆಯಲಾಗುವುದು. ಹೊಸ ಅಭಿವೃದ್ಧಿ ಇರಲಿ. ಮೊದಲಾಗಿದ್ದ ಅಭಿವೃದ್ಧಿಯನ್ನೂ ನಿಮ್ಮ ಸರ್ಕಾರದ ಅವಧಿಯಲ್ಲಿ ಹಾಳುಗೆಡವಲಾಗಿದೆ.

See also  ಎಸ್ಸೆಸ್ಸೆಲ್ಸಿ ಫಲಿತಾಂಶ ಮೇ ತಿಂಗಳ ಮೂರನೇ ವಾರದಲ್ಲಿ ಪ್ರಕಟವಾಗಲಿದೆ: ಬಿ.ಸಿ. ನಾಗೇಶ್

23. ಖಾಸಗಿ – ಸರ್ಕಾರಿ ಸಹಭಾಗಿತ್ವ ಮಾದರಿಯಲ್ಲಿ ಮಂಗಳೂರಿನಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ (ಐಸಿಸಿ) ಸ್ಥಾಪಿಸಲಾಗುವುದು. ಉದ್ಯಮ ವಲಯದ ಉತ್ತೇಜನಕ್ಕೆ ಈ ಕೇಂದ್ರಗಳು ಪ್ರಾಥಮಿಕ ಕೇಂದ್ರವಾಗಿ ಕೆಲಸ ಮಾಡಲಿವೆ ಎಂದಿರಿ. ಆದರೆ ವರ್ಷದಲ್ಲಿ ಮೂರು ತಿಂಗಳು ಮಂಗಳೂರು ಗಲಭೆಗಳಿಂದಾಗಿ ಬಂದ್ ಆಗಿರುತ್ತದೆ. ಉಳಿದ ಸಮಯದಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಸ್ಥಳೀಯ ಉದ್ಯಮಿಗಳೇ ಊರು ಬಿಟ್ಟು ಹೋಗುವ ಬಗ್ಗೆ ಯೋಚಿಸುವಂತಾಗಿದೆ.

24. ರಾಜ್ಯದಲ್ಲಿ ವಿಹಾರ ನೌಕಾಯಾನ ಸೇವೆಯನ್ನು ಆರಂಭಿಸಲು ಅಂತಾರಾಷ್ಟ್ರೀಯ ವಿಹಾರ ನೌಕಾಯಾನ ಸಂಸ್ಥೆಗಳ ಸದಸ್ಯರನ್ನು ಆಹ್ವಾನಿಸಲಾಗುವುದು, “ಸುಂದರ ಸಮುದ್ರ” ಪ್ಯಾಕೇಜ್ ಅಭಿವೃದ್ಧಿಪಡಿಸಲಾಗುವುದು ಹಾಗೂ ಈ ಮೂಲಕ ಪ್ರವಾಸಿಗರು ಸ್ಪೀಡ್ ಬೋಟ್ ಚಾಲನೆ, ಸಾಹಸ ಕ್ರೀಡೆ, ಆಳ ಸಮುದ್ರದ ಡೈವಿಂಗ್ ಮುಂತಾದ ಮನರಂಜನೆ ಪಡೆದುಕೊಳ್ಳುವಂತೆ ಮಾಡಲಾಗುವುದು ಎನ್ನುವ ನಿಮ್ಮ ಪ್ರಣಾಳಿಕೆಯಲ್ಲಿನ ಭರವಸೆ ಡಬ್ಬಲ್ ಎಂಜಿನ್ ಸರ್ಕಾರಗಳಿಗೆ ನೆನಪೇ ಇಲ್ಲವಲ್ಲ ಏಕೆ?

25. ಉತ್ತರ ಕರ್ನಾಟಕ, ಕರಾವಳಿ ಮತ್ತು ಹಳೆ ಮೈಸೂರು – ಹೀಗೆ ಮೂರು ಆಹಾರ ಪಥಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಆಹಾರ ಪಥಗಳು ಸ್ಥಳೀಯ ಅಡಿಗೆ ಪದಾರ್ಥಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ಸ್ಥಳೀಯ ಆಹಾರಗಳ ಮೂಲಗಳ ಕುರಿತು ಅರಿವು ಮೂಡಿಸುವುದಾಗಿ ಹೇಳಿದ್ದಿರಿ. ಏನಾಯ್ತು ?

ಇವೆಲ್ಲಾ ನೀವೇ ನಿಮ್ಮ ಕೈಯಿಂದಲೇ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಭರವಸೆಗಳು. ಚುನಾವಣೆ ಸಮಯಕ್ಕೆ ಸರಿಯಾಗಿ ಕರ್ನಾಟಕವನ್ನು ನೆನಪಿಸಿಕೊಳ್ಳುವ ನೀವು ಇಲ್ಲಿಗೆ ಬಂದು ಸೊಗಸಾದ ಸುಳ್ಳುಗಳನ್ನು ನಾಡಿನ ಜನರ ಕಿವಿಗೆ ಊದಿ ವಾಪಸ್ಸಾಗುತ್ತೀರಿ. ಮತ್ತೆ ಈ ಕಡೆ ತಲೆ ಹಾಕುವುದು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಬಂದಾಗಲೇ.

ಅದಕ್ಕೆ ಈ ಬಾರಿ ನೀವು ಬಂದಾಗ ನಿಮ್ಮ ಹಿಂದಿನ ಭರವಸೆಗಳಿಗೆ ಯಾವ ಗತಿ ಬಂದಿದೆ ಎನ್ನುವುದನ್ನು ದಯವಿಟ್ಟು ನಾಡಿನ ಜನತೆಗೆ ತಿಳಿಸಿ ಹೋಗಿ.

40% ಕಮಿಷನ್ ದಂಧೆಯ ಬಗ್ಗೆ ನಿಮಗೆ ಬಂದ ಮನವಿಗಳ ಕುರಿತು ಯಾವ ಕ್ರಮ ಕೈಗೊಂಡಿರಿ? ಅನೇಕ ಇಲಾಖಾ ಮಂತ್ರಿಗಳು ವರ್ಗಾವಣೆಯಲ್ಲಿ, ಖರೀದಿಯಲ್ಲಿ ಮಾಡುತ್ತಿರುವ ಭ್ರಷ್ಟಾಚಾರ ಕುರಿತು ನಿಮಗೆ ಅರ್ಜಿಗಳನ್ನು ಬರೆದು ನನಗೆ ಕಾಪಿ ಕಳುಹಿಸಿದ್ದಾರೆ. ಆ ಅರ್ಜಿಗಳ ಕುರಿತು ಯಾವ ಕ್ರಮ ಕೈಗೊಂಡಿರಿ ತಿಳಿಸಿ. ಈ ವರ್ಷ ಇಡೀ ದೇಶದಲ್ಲಿ 13 ಲಕ್ಷ ಹೆಕ್ಟೇರ್ ಬೆಳೆ ಪ್ರವಾಹದಿಂದ ಹಾಳಾಗಿದೆ ಎಂಬ ವರದಿಗಳಿವೆ. ಅದರಲ್ಲಿ ಶೇ 50 ರಷ್ಟು ಹಾನಿ ಕರ್ನಾಟಕದ ರೈತರಿಗೆ ಆಗಿದೆ. ನಮ್ಮ ರೈತರಿಗೆ ಯಾವಾಗ ಪರಿಹಾರ ಕೊಡುತ್ತೀರಿ?

ನೀವು ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ರಾಜ್ಯ ಭೀಕರ ಆರ್ಥಿಕ ಅನ್ಯಾಯವನ್ನು ಅನುಭವಿಸುತ್ತಿದೆ. ಅದಕ್ಕೆ ನಿಮ್ಮ ಬಳಿ ಇರುವ ಪರಿಹಾರವೇನು? ನಮ್ಮ ಕರಾವಳಿಯ ಹಿರಿಯರು ಕಟ್ಟಿ ಬೆಳೆಸಿದ ಬ್ಯಾಂಕ್‍ಗಳನ್ನು ಮುಚ್ಚಿ ಸ್ಥಳೀಯ ಯುವಕರಿಗೆ ಸಿಗಬೇಕಿದ್ದ ಬ್ಯಾಂಕ್ ಹುದ್ದೆಗಳನ್ನು ನಾಶ ಮಾಡಿದಿರಿ. ನಮ್ಮ ಬ್ಯಾಂಕ್‍ಗಳನ್ನು ನಮಗೆ ಯಾವಾಗ ವಾಪಾಸ್ ಕೊಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು