ಬೆಂಗಳೂರು, ಡಿ.2: ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಿರುವ “ಬೆಂಗಳೂರು ಅರ್ಟ್ಸ್ ಆಂಡ್ ಕ್ರಾಪ್ಟ್ಸ್ ಮೇಳ” (ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ) ಕ್ಕೆ ನಟಿಯರಾದ ರಿಷಿಕಾ ಮತ್ತು ಇಶಾನ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಖುಷಿ ವ್ಯಕ್ತಪಡಿಸಿದ ನಟಿ ರಿಷಿಕಾ, ‘ಇದೊಂದು ರೀತಿಯಲ್ಲಿ ಕಲಾವಿದರ ಸ್ವರ್ಗ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ದ ಕುಶಲಕರ್ಮಿಗಳು ಇಲ್ಲಿ ತಮ್ಮ ಅಪರೂಪದ ವಸ್ತುಗಳೊಂದಿಗೆ ಆಗಮಿಸಿದ್ದಾರೆ. ಹತ್ತು ದಿನಗಳ ಕಾಲ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿರುವ ಈ ಪ್ರದರ್ಶನದಲ್ಲಿ ಕೈಯಿಂದಲೇ ತಯಾರು ಮಾಡಲಾದ ನೂರಾರು ವಿನ್ಯಾಸಗಳಿವೆ. ಒಡವೆ ವಸ್ತ್ರ ಆಭರಣ ಹಾಗೂ ಅಪರೂಪದ ಕರಕುಶಲ ವಸ್ತುಗಳಿವೆ. ಬೇರೆಲ್ಲೂ ಸಿಗದ ಅಮೂಲ್ಯ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಇಲ್ಲಿ ದೊರೆಯುತ್ತಿವೆ’ ಎಂದರು.
ಇನ್ನೋರ್ವ ನಟಿ ಇಶಾನ ಮಾತನಾಡಿ, ‘ಈ ಆರ್ಟ್ ಮೇಳದಲ್ಲಿ ಹತ್ತು ಹಲವು ವೈವಿಧ್ಯಮಯ ವಸ್ತುಗಳ ನೂರಕ್ಕೂ ಹೆಚ್ಚಿನ ಮಳಿಗೆಗಳಿವೆ. ಆಭರಣಗಳು, ಪೇಂಟಿಂಗ್ಗಳು, ಉಡುಪು, ಪೀಠೋಪಕರಣಗಳು, ಇತರ ಕರಕುಶಲ ಸಾಮಗ್ರಿಗಳು ಇಲ್ಲಿವೆ. ಗ್ರಾಹಕರಿಗೆ ಗೊಂದಲ ಉಂಟು ಮಾಡುವಷ್ಟು ವೈವಿಧ್ಯಗಳಿವೆ. ಪ್ರತಿಯೊಂದು ವಸ್ತುವನ್ನು ತೆಗೆದುಕೊಳ್ಳಬೇಕು ಎಂಬ ಬಯಕೆ ಮೂಡುವಂತೆ ಮಾಡುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ಹಾಗೂ ಹೆಚ್ಚಿನ ವಸ್ತುಗಳನ್ನು ಖರೀದಿಸಿ” ಎಂದು ಮನವಿ ಮಾಡಿಕೊಂಡರು.
ಹತ್ತು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿದೆ. ಇನ್ನು ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.