ಬೆಂಗಳೂರು ನಗರ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಮಾತಾನಾಡಿ ಬೆಂಗಳೂರಿನಲ್ಲಿ ಕಳೆದ 20-30 ವರ್ಷಗಳಿಂದ ಅಪಾರ್ಟ್ ಮೆಂಟ್ ಸಂಸ್ಕೃತಿ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಅಪಾರ್ಟ್ ಮೆಂಟ್ ಗಳು ಹೆಚ್ಚಾಗಿದ್ದು, ದೊಡ್ಡ ಅಪಾರ್ಟ್ ಮೆಂಟ್ ಗಳ ಜತೆಗೆ ಸಣ್ಣ ಅಪಾರ್ಟ್ ಮೆಂಟಗಳು ಇವೆ. ಕಳೆದ 10 ವರ್ಷಗಳಿಂದ ಬೆಂಗಳೂರಿನ ಹೊರವಲಯಗಳಲ್ಲಿ ಅಪಾರ್ಟ್ ಮೆಂಟ್ ಗಳು ಹೆಚ್ಚಾಗುತ್ತಿವೆ.
ಹೆಚ್ಚುವರಿ ಸೌಕರ್ಯ, ಭದ್ರತೆ ಕಾರಣಗಳಿಂದ ಅಪಾರ್ಟ್ ಮೆಂಟ್ ಗಳಲ್ಲಿ ವಾಸ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಜನಸಂಖ್ಯೆ ಶೇ.10ರಷ್ಟು ಜನ ಈಗ ಅಪಾರ್ಟ್ ಮೆಂಟ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ನಿವಾರಿಸಲು ಕಾಂಗ್ರೆಸ್ ಸರ್ಕಾರ ಬಗೆಹರಿಸುವ ಪ್ರಯತ್ನ ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ಸರ್ಕಾರ ಕೇಳುತ್ತಿಲ್ಲ.
ಹೀಗಾಗಿ ನಾವು ಅಪಾರ್ಟ್ ಮೆಂಟ್ ನಿವಾಸಿಗಳ ಶಾಶ್ವತ ಘಟಕವನ್ನು ಆರಂಭಿಸಲು ತೀರ್ಮಾನಿಸಿದೆ. ಅಪಾರ್ಟ್ ಮೆಂಟ್ ನಿವಾಸಿಯಾಗಿರುವ ಪ್ರೋ. ರಾಜೀವ್ ಗೌಡ ಅವರನ್ನು ಈ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅಪಾರ್ಟ್ ಮೆಂಟ್ ಸಮಸ್ಯೆಗಳನ್ನು ಅರಿತಿರುವವರೇ ಈಗ ಘಟಕದಲ್ಲಿ ಅವಕಾಶ ನೀಡಲಾಗಿದೆ.
ಅಪಾರ್ಟ್ ಮೆಂಟ್ ಗಳ ಮಾಹಿತಿ, ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತೇವೆ. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವುಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇವೆ.
ಇನ್ನು ಬಿಜೆಪಿ ಸರ್ಕಾರ ಜನರ ರಕ್ಷಣೆಗೆ ಕೆಲಸ ಮಾಡುತ್ತಿಲ್ಲ. ಜನರ ರಕ್ತ ಹೀರುವ ಸರ್ಕಾರ ಇದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿ ಜನರ ಜೀವನ ಹಾಗೂ ಪ್ರಾಣವನ್ನು ಬಲಿ ಪಡೆಯುತ್ತಿದೆ.
ಬೆಲೆ ಏರಿಕೆ, ನಿರುದ್ಯೋಗ, ನೋಟ್ ಬ್ಯಾನ್, ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಏರಿಕೆ, ಆರ್ಥಿಕ ಸಮಸ್ಯೆ ಮೂಲಕ ಜೀವನವನ್ನು ನರಕ ಮಾಡಿದರೆ. ಕೋವಿಡ್ ನಿರ್ವಹಣೆ ವೈಫಲ್ಯ, ಆಕ್ಸಿಜನ್ ಕೊರತೆ, ರಸ್ತೆ ಗುಂಡಿಗಳು, ಸರ್ಕಾರದ ಕಳಪೆ ಕಾಮಗಾರಿ ಮೂಲಕ ಜನರ ಪ್ರಾಣ ತೆಗೆದುಕೊಳ್ಳುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ರಸ್ತೆ ಗುಂಡಿ, ಚರಂಡಿ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತಾಡಿ ಎಂಬ ಹೇಳಿಕೆಯಲ್ಲಿ ಅವರ ಮನಸ್ಥಿತಿ ಹೇಗಿದೆ ಎಂಬುದು ತಿಳಿಯುತ್ತದೆ.
ನಿನ್ನೆ ಮೆಟ್ರೋ ಕಾಮಗಾರಿಯ ಪಿಲ್ಲರ್ ಬಿದ್ದು ಎರಡು ಅಮಾಯಕ ಜೀವ ಬಲಿಯಾಗಿವೆ. ಮಗು ಹಾಗೂ ತಾಯಿಯ ಬಲಿ ಆಗಿದೆ. ಇದೇ ರೀತಿ ರಸ್ತೆ ಗುಂಡಿಗಳಿಂದ ಇದು ವರಗೆ ಸುಮಾರು 17 ಜನ ಪ್ರಾಣ ಕಳೆದು ಕೊಂಡಿದ್ದಾರೆ. ಮೇಟ್ರೋ ಕಾಮಗಾರಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು 16 ಜನ ಪ್ರಾಣ ಕಳೆದು ಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ಪಿಲ್ಲರ್ ವಾಲಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಅಂದರೆ ರಾಜ್ಯದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಪರಮಾವಧಿ ತಲುಪಿದೆ. ಮೆಟ್ರೋ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುತ್ತದೆ? ಅಲ್ಲದೆ ಬೆಂಗಳೂರಿನ 8 ಶಾಸಕರು ಅಷ್ಟದಿಗ್ಪಾಲಕರಂತೆ ಮಂತ್ರಿಗಳಾಗಿದ್ದಾರೆ.
ಮೃತರಿಗೆ ಸರ್ಕಾರ ಪರಿಹಾರ ನೀಡುತ್ತದೆ ಎಂದು ತಿಳಿಸಿದ್ದಾರೆ. ಆದರೆ ಮೃತರ ತಂದೆ ನಾವೇ ನಿಮಗೆ ಕೋಟಿ ಹಣ ನೀಡುತ್ತೇವೆ ನಮ್ಮ ಮಗಳನ್ನು ವಾಪಸ್ ಕರೆ ತನ್ನಿ ಎಂದು ಕೇಳಿದ್ದಾರೆ. ಇಂತಹ ಘಟನೆ ಪದೇ ಪದೆ ಆಗುತ್ತಿದ್ದರೂ ಸರ್ಕಾರ ಎಚ್ಛೆತ್ತುಕೊಳ್ಳುತ್ತಿಲ್ಲ. ಎಲ್ಲವನ್ನು ವ್ಯವಸ್ಥಾಪಕ ನಿರ್ದೇಶಕರೇ ನೋಡಲು ಸಾಧ್ಯವಿಲ್ಲ. ಸಾವಿರಾರು ಕೆಲಸಗಾರರು, ನೂರಾರು ಇಂಜಿನಿಯರ್ ಗಳು ಇರುತ್ತಾರೆ. ಇಲ್ಲಿನ ಕೆಲವು ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಈ ಅನಾವುತ ಸಂಭವಿಸಿದೆ.
ಈ ಸರ್ಕಾರದ ದುರಾಡಳಿತಕ್ಕೆ ಇನ್ನು ಎಷ್ಟು ಬಲಿ ಬೇಕು? ಈ ಭ್ರಷ್ಟ ಸರ್ಕಾರಕ್ಕೆ ಹಣ ಬಿಟ್ಟು ಬೇರೇನೂ ಕಾಣುವುದಿಲ್ಲ. ಮೆಟ್ರೋ ಅಧಿಕಾರಿಗಳು ಈಗಲಾದರೂ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಮುಖ್ಯಮಂತ್ರಿಗಳು ಮೆಟ್ರೋ ಅಧಿಕಾರಿಗಳ ಜತೆ ಸಭೆ ಮಾಡುತ್ತಿರಬೇಕು. ಮುಖ್ಯಮಂತ್ರಿಗಳಿಗೆ ಸಮಯ ಇಲ್ಲದಿದ್ದರೆ, ಮಂತ್ರಿಗಳಿಗಾದರೂ ಜವಾಬ್ದಾರಿ ನೀಡಬೇಕು.
ಮೆಟ್ರೋ ಪಿಲ್ಲರ್ ಕುಸಿತದ ಅವಾಂತರವಾಗಲಿ, ರಸ್ತೆ ಗುಂಡಿ ಅನಾಹುತಗಳಾಗಲಿ, ಇಂತಹ ದುರಂತ ತಪ್ಪಿಸಬೇಕು ಎಂದರೆ ಗುಣಮಟ್ಟದ ಕಾಮಗಾರಿ ಆಗಬೇಕು.
ಗುಣಮಟ್ಟದ ಕಾಮಗಾರಿ ಆಗಬೇಕು ಎಂದರೆ ಸರ್ಕಾರ ತನ್ನ ಭ್ರಷ್ಟಾಚಾರಕ್ಕೆ ಅಂಕುಶ ಹಾಕಬೇಕು. ಗುತ್ತಿಗೆದಾರರು ಈ ಸರ್ಕಾರ 40% ಕಮಿಷನ್ ಪಡೆಯುತ್ತಿದ್ದು, ಉಳಿದ 60% ನಲ್ಲಿ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಭ್ರಷ್ಟಾಚಾರ ಹೆಚ್ಚಾದಷ್ಟು ಕಳಪೆ ಕಾಮಗಾರಿಗಳು ಹೆಚ್ಚಾಗುತ್ತವೆ.
ಮುಖ್ಯಮಂತ್ರಿಗಳು ಮಾತೆತ್ತಿದರೆ ಧಮ್ಮು ತಾಕತ್ತಿನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಧಮ್ಮು ತಾಕತ್ತು ಇದ್ದರೆ ಗುಣಮಟ್ಟದ ಕಾಮಗಾರಿ ಮಾಡಲಿ. ಆಗ ಅಣಾಯಕ ಜೀವಗಳು ಉಳಿಯುತ್ತವೆ.
ಇನ್ನು ಕಳೆದ 25 ತಿಂಗಳ ಬಾಕಿ ಬಿಲ್ ಪಾವತಿ ಆಗದೆ ಕಾಮಗಾರಿ ಸ್ಥಗಿತ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳ ಬಿಲ್ ಪಾವತಿ ಮಾಡದಿದ್ದರೆ ಅವರು ಕೆಲಸ ಮಾಡುವುದಾದರು ಹೇಗೆ? ಸರ್ಕಾರ ಹಣ ಮಾಡುವ ಕೆಲಸಕ್ಕೆ ವಿರಾಮ ಕೊಟ್ಟು, ಮತ ಹಾಕಿದ ಜನರ ಹಿತ ಕಾಯುವ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಇದೇ ರೀತಿ ಅಮಾಯಕರ ಬಲಿ ಮುಂದುವರಿಯಲಿದೆ.
ಇಷ್ಟೆಲ್ಲಾ ಸಮಸ್ಯೆ ಅನಾಹುತಗಳಿಗೆ, ಬಿಜೆಪಿಯ ಹಣದಾಹ ಹಾಗೂ ದುರಾಡಳಿತವೇ ಕಾರಣ. ಈ ದುರಾಡಳಿತ ಕೊನೆಗಾಣಿಸುವ ಕಾಲ ಸನ್ನಿಹಿತವಾಗಿದೆ. ಡಬ್ಬಲ್ ಎಂಜಿನ್ ಸರ್ಕಾರ ಕೇವಲ ಜನರ ಜೀವ ತೆಗೆಯುತ್ತಿದೆ ಹೊರತು ಅಭಿವೃದ್ದಿ ಬಗ್ಗೆ ಯಾವುದೇ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಜನ ಈ ಅನಿಷ್ಟ ಸರ್ಕಾರದಿಂದ ಬೇಸತ್ತಿದ್ದು, ಈ ಸರ್ಕಾರದಿಂದ ಮುಕ್ತಿ ಪಡೆಯುವ ಸಂಕಲ್ಪ ಮಾಡಿದ್ದಾರೆ.
ಪ್ರಶ್ನೋತ್ತರ:
ಬಹುತೇಕ ಅಪಾರ್ಟ್ ಮೆಂಟ್ ಕಟ್ಟಡ ನಿರ್ಮಾಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ ಎಂಬ ವಿಚಾರವಾಗಿ ಕೇಳಿದಾಗ, ‘ಕಟ್ಟಡ ನಿರ್ಮಾಣ ವಿಚಾರಕ್ಕೂ ನಮಗೂ ಸಂಬಂಧ ಇರುವುದಿಲ್ಲ. ಆದರೆ ಅಲ್ಲಿನ ನಿವಾಸಿ ಮೂಲಸೌಕರ್ಯಗಳ ಸಮಸ್ಯೆ ಬಗೆಹರಿಸಲು ಈ ಘಟಕ ಸ್ಥಾಪಿಸಲಾಗಿದೆ. ಕೋರ್ಟ್ ಪ್ರಕರಣಗಳಿಗೆ ನಮಗೆ ಸಂಬಂಧವಿಲ್ಲ. ಅದನ್ನು ಕಾನೂನು ನೋಡಿಕೊಳ್ಳಲಿದೆ. ಇದಕ್ಕಾಗಿಯೇ ಬೇರೆ ಸಂಸ್ಥೆಗಳು ನ್ಯಾಯಾಲಯಗಳು ಇವೆ. ಎಲ್ಲ ಅಪಾರ್ಟ್ ಮೆಂಟ್ ಗಳು ನಿಯಮ ಉಲ್ಲಂಘನೆ ಮಾಡಿ ಅಪಾರ್ಟ್ ಮೆಂಟ್ ಕಟ್ಟಿಲ್ಲ. ನೂರರಲ್ಲಿ ಶೇ.10ರಷ್ಟು ಮಂದಿ ಅಕ್ರಮವಾಗಿ ಕಟ್ಟಿರಬಹುದು. ಆದರೆ ಉಳಿದ 90ರಷ್ಟು ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕಲ್ಲವೇ? ಒತ್ತುವರೆ ತೆರವಿಗೆ ನಮ್ಮ ಅಡ್ಡಿ ಇಲ್ಲ. ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ಈ ವಿಚಾರವಾಗಿ ಬಿಡಿಎ ಬಿಬಿಎಂಪಿ ಹಾಗೂ ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತವೆ. ಕಾನೂನು ಪ್ರಕಾರವಾಗಿ ಕಟ್ಟಿರುವ ಅಪಾರ್ಟ್ ಮೆಂಟ್ ಕಟ್ಟಿರುವವರ ಪರವಾಗಿ ಇರುತ್ತೇವೆ. ಅವರಿಗೆ ನೆರವಾಗಲು ಈ ಘಟಕ ಆರಂಭಿಸಿದ್ದೇವೆ’ ಎಂದು ತಿಳಿಸಿದರು.