News Kannada
Sunday, October 01 2023
ಬೆಂಗಳೂರು ನಗರ

ಬೆಂಗಳೂರು: ಭಾವನಾತ್ಮಕ ವಿಚಾರ ಬಿಟ್ಟು ಭ್ರಷ್ಟಾಚಾರ ಕುರಿತು ಚರ್ಚಿಸಿ, ಸಿದ್ದರಾಮಯ್ಯ ಆಗ್ರಹ

Cong releases 1st list of 124 candidates, Siddaramaiah to contest from Varuna
Photo Credit : News Kannada

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಬಜೆಟ್‌ ಕುರಿತಾಗಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದರು. ಎಸಿಬಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಒಟ್ಟು 16 ರಾಜ್ಯಗಳಲ್ಲಿ ಇದೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತದ ಅಧಿಕಾರ ಕಸಿಯಲಾಗಿದೆ ಎಂದು ಹೇಳುವುದು ಸರಿಯಲ್ಲ, ಅಡ್ವೊಕೇಟ್‌ ಜನರಲ್‌ ಅವರು ಎಸಿಬಿ ರಚನೆ ಮಾಡಿರುವುದು ಸರಿ ಎಂದು ಕೋರ್ಟ್‌ ನಲ್ಲಿ ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಸರಕಾರ ಯಾಕೆ ಹೇಳಿಕೆ ಕೊಡಬೇಕು? ಕೋರ್ಟ್‌ ನಲ್ಲಿ ಒಂದು ಹೊರಗಡೆ ಒಂದು ಭಿನ್ನ ನಿಲುವು ಯಾಕೆ? ಸಿದ್ದರಾಮಯ್ಯ ಅವರು ತಮ್ಮ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಉದ್ದೇಶಪೂರ್ವಕವಾಗಿ ಎಸಿಬಿ ರಚನೆ ಮಾಡಿ ಲೋಕಾಯುಕ್ತದ ಅಧಿಕಾರವನ್ನು ಕಿತ್ತುಕೊಂಡರು ಎಂದು ಜನರಿಗೆ ತಪ್ಪು ಮಾಹಿತಿ ನೀಡುವುದು ಯಾಕೆ? ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಯಾಕೆ ಇನ್ನು ಎಸಿಬಿಯನ್ನು ರದ್ದು ಮಾಡಿಲ್ಲ? ನನ್ನ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ್ದ ಅನೇಕ ದೂರುಗಳು ಆಧಾರ ರಹಿತವಾದವು ಎಂದು ಲೋಕಾಯುಕ್ತದವರೇ ರದ್ದು ಮಾಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಅನೇಕ ಆರೋಪಗಳು ಬಂದ ಹೊರತಾಗಿಯೂ ಸರ್ಕಾರ ಯಾವುದೇ ತನಿಖೆ ಮಾಡಿಸಲಿಲ್ಲ. ಸರ್ಕಾರ ಈಗಲಾದರೂ ಸುಪ್ರೀಂ ಕೋರ್ಟ್‌ ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ರಚನೆ ಮಾಡಿ ನಮ್ಮ ವಿರುದ್ಧ ಮತ್ತು ಈಗಿನ ಸರ್ಕಾರದ ವಿರುದ್ಧ ಇರುವ ಎಲ್ಲಾ ಆರೋಪಗಳನ್ನು ತನಿಖೆ ಮಾಡಿಸಲಿ. ಸುಮ್ಮನೆ ಆರೋಪ ಮಾಡುವುದರಿಂದ ಸತ್ಯ ಹೊರಬರುವುದಿಲ್ಲ.

ಅಬ್ಬಕ್ಕ ವರ್ಸಸ್‌ ಟಿಪ್ಪು ಸುಲ್ತಾನ್‌, ಗಾಂಧಿ ವರ್ಸಸ್‌ ಗೋಡ್ಸೆ ಇಂಥ ಭಾವನಾತ್ಮಕ ವಿಚಾರಗಳನ್ನು ಬಿಟ್ಟುಬಿಡಿ, ಅಭಿವೃದ್ಧಿ ವಿಚಾರಗಳ ಮೇಲೆ ಚರ್ಚೆ ಮಾಡೋಣ ಬನ್ನಿ. ಸಾರ್ವಜನಿಕವಾಗಿ ಅಭಿವೃದ್ಧಿ ವಿಷಯ ಚರ್ಚೆಯಾಗಲಿ. ಸಚಿವರೊಬ್ಬರು ಟಿಪ್ಪು ಸುಲ್ತಾನ್ ನನ್ನು ಮೇಲೆ ಕಳಿಸಿದಂತೆ ಸಿದ್ದರಾಮಯ್ಯ ಅವರನ್ನು ಮೇಲೆ ಕಳಿಸಿ ಎಂದಿದ್ದಾರೆ. ಕೊಲೆ ಮಾಡು ಎಂದು ಯಾವುದಾದರೂ ಧರ್ಮ ಹೇಳುತ್ತದಾ? ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇಂಥಾ ಬೆದರಿಕೆಗಳಿಗೆ ಹೆದರಿಕೊಂಡು ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವವನು ನಾನಲ್ಲ. ನಾನು ನನ್ನ ಜೀವನದ ಕೊನೆಯವರೆಗೆ ಸಮಾಜದ ದುರ್ಬಲುರು, ಅವಕಾಶ ವಂಚಿತರು, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದ ಜನರ ಪರವಾಗಿಯೇ ಇರುತ್ತೇನೆ. ಧಮ್‌, ತಾಕತ್ ಇದ್ದರೆ ಹೊಡೆದುಹಾಕಲಿ ನೋಡೋಣ.

ಹಣಕಾಸಿನ ಪರಿಸ್ಥಿತಿ ಬಹಳಾ ಸದೃಢವಾಗಿದೆ ಎಂದು ಬಜೆಟ್‌ ನಲ್ಲಿ ಹೇಳಿದ್ದಾರೆ. ಆದರೆ ಇನ್ನೊಂದು ಕಡೆ ಆರ್ಥಿಕ ಇಲಾಖೆಯವರು, ನಾವು ಈಗಾಗಲೇ ವಿತ್ತೀಯ ಕೊರತೆ ಎದುರಿಸುತ್ತಿದ್ದೇವೆ, ಆ ಕಾರಣದಿಂದ ಗ್ರಾಂಟ್‌ ಇನ್‌ ಏಡ್‌ ಗೆ ಸೇರಿಸೋಕೆ ಆಗಲ್ಲ, ಹಣಕಾಸಿನ ಪರಿಸ್ಥಿತಿ ಬಹಳ ಕೆಟ್ಟು ಹೋಗಿದೆ ಎಂದು ಫೈಲ್‌ ಮೇಲೆ ಬರೆದ್ದಿದ್ದಾರೆ. ಕೊರೊನಾ, ಪ್ರವಾಹ ಬಂದ ಕಾರಣಕ್ಕೆ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಕಾರಣ ಕೊಟ್ಟಿದ್ದಾರೆ. ಇಡೀ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿರುವುದು 15 ರಿಂದ 16 ಸಾವಿರ ಕೋಟಿ ರೂ. ಪ್ರವಾಹಕ್ಕೆ ಖರ್ಚು ಮಾಡಿರುವುದು 6000 ಕೋಟಿ. ಪ್ರವಾಹದಿಂದ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಸುಮಾರು 3 ಲಕ್ಷ ಮನೆಗಳು ಹಾನಿಗೊಳಗಾಗಿತ್ತು, ಇದಕ್ಕೆ ಒಂದು ಕಂತು ಪರಿಹಾರ ಕೊಟ್ಟರು, ನಂತರದ ಕಂತು ಕೊಟ್ಟೆ ಇಲ್ಲ. 2022ರಲ್ಲಿ ಪ್ರವಾಹ ಬಂದಾಗ 1944 ಕೋಟಿ ಪರಿಹಾರ ಕೇಳಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ, ಇವತ್ತಿನವರೆಗೆ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಈ ಸರ್ಕಾರವನ್ನು ಅತ್ಯಂತ ದುರ್ಬಲ ಸರ್ಕಾರ ಎನ್ನದೆ ಏನನ್ನಬೇಕು?

15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಲಾಗಿತ್ತು, ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಇದನ್ನು ತಿರಸ್ಕಾರ ಮಾಡಿದರು. ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಸಂಸದರು ಈ ಬಗ್ಗೆ ಒಂದು ದಿನ ಮಾತನಾಡಿಲ್ಲ, ಒತ್ತಡ ಹಾಕಿಲ್ಲ. ಸದನದಲ್ಲಿ ಮೋದಿ ಮೋದಿ ಎಂದು ಕೂಗುವುದು, ಮೇಜು ತಟ್ಟುವುದು ಮಾತ್ರ ಅವರು ಮಾಡುತ್ತಿರುವ ಕೆಲಸ.

ನಾನು ಮುಖ್ಯಮಂತ್ರಿಯಾಗಿ ಮಂಡಿಸಿರುವ 6 ಬಜೆಟ್‌ ಗಳು ಪಾರದರ್ಶಕತೆ ಮತ್ತು ಉತ್ತರದಾಯಿತ್ವದಿಂದ ಕೂಡಿತ್ತು. ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ನಾವು 5 ವರ್ಷಗಳಲ್ಲಿ ಏನು ಕೆಲಸ ಮಾಡಿದ್ದೇವೆ, ಯಾವೆಲ್ಲ ಭರವಸೆ ನೀಡಿದ್ದೆವು, ಎಷ್ಟು ಈಡೇರಿಸಿದ್ದೇವೆ, ಮುಂದೆ ಅಧಿಕಾರಕ್ಕೆ ಬಂದರೆ ಏನೆಲ್ಲ ಮಾಡುತ್ತೇವೆ ಎಂದು ಹೇಳಿದ್ದೆ. ಈ ಬಜೆಟ್‌ ನಲ್ಲಿ ಇಂಥಾ ಪಾರದರ್ಶಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿರುವಾಗ ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ, ಈ ಸರಕಾರ ಅದನ್ನು 5 ಕೆ.ಜಿ ಗೆ ಇಳಿಸಿತು, ಯಾಕೆ ಎಂದು ಪ್ರಶ್ನೆ ಮಾಡಿದರೆ ದುಡ್ಡಿಲ್ಲ ಎಂದರು. ಈ ಅನ್ನಭಾಗ್ಯ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್‌, ಮಧ್ಯಪ್ರದೇಶ, ಅಸ್ಸಾಂನಲ್ಲಿ ಯಾಕಿಲ್ಲ? 3 ರೂ. ಗೆ ಅಕ್ಕಿ ನೀಡುವಂತೆ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಮನಮೋಹನ್‌ ಸಿಂಗ್‌ ಅವರ ಸರ್ಕಾರ. ಮೋದಿ ಅಥವಾ ವಾಜಪೇಯಿ ಅವರಲ್ಲ.

ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 15 ಲಕ್ಷದ 54 ಸಾವಿರ ಮನೆಗಳನ್ನು ನಿರ್ಮಾಣ ಮಾಡಿ, ಅನುದಾನ ನೀಡಿದ್ದೆವು. ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ 15 ಲಕ್ಷ ಮನೆಗಳ ಘೋಷಣೆ ಮಾಡಿ, ದುಡ್ಡು ಕೊಟ್ಟಿಲ್ಲ ಎಂದು ಸುಳ್ಳು ಹೇಳುವುದು ಯಾಕೆ? ಈ ಸರ್ಕಾರ 4 ಲಕ್ಷದ 93 ಸಾವಿರ ಮನೆಗಳನ್ನು ಕಟ್ಟಿದ್ದರೆ ಅದು ನಮ್ಮ ಸರ್ಕಾರ ಮಂಜೂರು ಮಾಡಿದ ಮನೆಗಳು. ಈ ಸರ್ಕಾರ ಹೊಸದಾಗಿ ಮನೆಗಳನ್ನು ಮಂಜೂರು ಮಾಡಿಲ್ಲ. ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆಗಳನ್ನು ಕಟ್ಟಲು ಈ ಸರ್ಕಾರದಿಂದ ಆಗಿಲ್ಲ.

ಸುನಿಲ್‌ ಕುಮಾರ್‌ ಅವರು ಈ ಬಜೆಟ್‌ ಅನ್ನು ತೆರಿಗೆ ಸಂಗ್ರಹದ ಅಮೃತ ಕಾಲದ ಬಜೆಟ್‌ ಎಂದು ಕರೆದಿದ್ದಾರೆ. ನನ್ನ ಪ್ರಕಾರ ಇದು ತೆರಿಗೆ ಸುಲಿಗೆಯ ಕತ್ತಲ ಕಾಲದ ಬಜೆಟ್‌. ಈ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್‌ ಜಾಸ್ತಿಮಾಡಿದೆ. ಅಕ್ಕಿ, ರಾಗಿ, ಗೋಧಿ, ಪೆನ್ನು, ಪೆನ್ಸಿಲ್‌, ಮಂಡಕ್ಕಿ, ಹಾಲು, ಮೊಸರು, ಹಸುಗಳು ತಿನ್ನುವ ಹಿಂಡಿ, ಬೂಸಾಗಳ ಮೇಲೆ 5 ರಿಂದ 18% ತೆರಿಗೆ ವಿಧಿಸಿದ್ದಾರೆ. 80% ತೆರಿಗೆಯನ್ನು ರಾಜ್ಯದ ಬಡವರು, ಕಾರ್ಮಿಕರು ಕಟ್ಟುತ್ತಿದ್ದಾರೆ.

ಬೆಲೆಯೇರಿಕೆ, ಕೆಟ್ಟ ಕೃಷಿ ನೀತಿಯಿಂದಾಗಿ ರಾಜ್ಯದ ರೈತರನ್ನು ಸಾಲಗಾರನನ್ನಾಗಿ ಮಾಡಿದೆ. ಸ್ವಾತಂತ್ರ್ಯ ಬಂದ ನಂತರದಿಂದ ನಾನು ಅಧಿಕಾರದಿಂದ ಇಳಿಯುವ ವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಮಾಡಿದ್ದ ಒಟ್ಟು ಸಾಲ 1 ಲಕ್ಷದ 16 ಸಾವಿರ ಕೋಟಿ. ನಾನು ಮುಖ್ಯಮಂತ್ರಿಯಾಗಿರುವಾಗ ಸಿದ್ದರಾಮಯ್ಯ ಸರ್ಕಾರ ಬಹಳಾ ಸಾಲ ಮಾಡಿದೆ, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂದು ಹೇಳುತ್ತಿದ್ದರು. ಈಗ ಬಿಜೆಪಿ ಸರ್ಕಾರ ಮಾಡುತ್ತಿರುವುದು ಏನು? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು 41,916 ಕೋಟಿ ಸಾಲ ಮಾಡಿದ್ದರು. ಇದನ್ನು ಬಿಟ್ಟರೆ ಉಳಿದ 4 ವರ್ಷಗಳಲ್ಲಿ ಬಿಜೆಪಿ ಮಾಡಿರುವ ಸಾಲ 2 ಲಕ್ಷದ 54 ಸಾವಿರ ಕೋಟಿ. ಮುಂದಿನ ವರ್ಷ 77,750 ಕೋಟಿ ರೂ. ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ಇದು ಸೇರಿ 3 ಲಕ್ಷದ 32 ಸಾವಿರ ಕೋಟಿ ಸಾಲ ಆಗುತ್ತದೆ. 2024ರ ಅಂತ್ಯಕ್ಕೆ 5 ಲಕ್ಷದ 64 ಸಾವಿರ ಕೋಟಿ ರೂ. ಸಾಲ ಆಗುತ್ತದೆ ಎಂದು ಮುಖ್ಯಮಂತ್ರಿಗಳು ಬಜೆಟ್‌ ನಲ್ಲಿ ಹೇಳಿದ್ದಾರೆ.

ಬಡ್ಡಿ ರೂಪದಲ್ಲಿ 34,000 ಕೋಟಿ ಹಾಗೂ ಅಸಲು 22 ಸಾವಿರ ಕೋಟಿ ಕಟ್ಟಬೇಕು ಅಂದರೆ ವರ್ಷಕ್ಕೆ 56 ಸಾವಿರ ಕೋಟಿಯಷ್ಟು ಸಾಲ ಮರುಪಾವತಿ ಮಾಡಬೇಕು. ಇದು ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗದ, ಲಾಭದಾಯಕವಲ್ಲದ ಖರ್ಚು. ಇದರಿಂದ ಅಭಿವೃದ್ಧಿ ಯೋಜನೆಗಳಿಗೆ ಹಣ ಸಿಗುತ್ತಿಲ್ಲ. ದೀಪೆಂದ್ರ ಸಿಂಗ್‌ ಹೂಡ ಎನ್ನುವವರು ಕೇಳಿದ ಪ್ರಶ್ನೆಗೆ ಪಂಕಜ್‌ ಚೌದರಿ ಎಂಬ ರಾಜ್ಯ ಖಾತೆಯ ಕೇಂದ್ರ ಹಣಕಾಸು ಸಚಿವರು ನೀಡಿದ ಉತ್ತರದಲ್ಲಿ 2018ರಲ್ಲಿ 2 ಲಕ್ಷದ 45 ಸಾವಿರ ಕೋಟಿ ಕರ್ನಾಟಕದ ಮೇಲೆ ಸಾಲ ಇತ್ತು, 2019 ರಲ್ಲಿ 2 ಲಕ್ಷದ 86 ಸಾವಿರ ಕೋಟಿ, 2020ರಲ್ಲಿ 3 ಲಕ್ಷದ 38 ಸಾವಿರ ಕೋಟಿ, 2021ರಲ್ಲಿ 4 ಲಕ್ಷದ 21 ಸಾವಿರ ಕೋಟಿ, 2022ರ ಮಾರ್ಚ್‌ ನಲ್ಲಿ 4 ಲಕ್ಷದ 73 ಸಾವಿರ ಕೋಟಿ ಸಾಲ ಇತ್ತು, 2023ರ ಮಾರ್ಚ್‌ ಗೆ 5 ಲಕ್ಷದ 40 ಸಾವಿರ ಕೋಟಿ, 2024ರ ಮಾರ್ಚ್‌ ಗೆ 6 ಲಕ್ಷದ 18 ಸಾವಿರ ಕೋಟಿ ಒಟ್ಟು ಸಾಲ ಆಗಲಿದೆ ಎಂದು ಹೇಳಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಲೆಕ್ಕದ ವ್ಯತ್ಯಾಸ 53,472 ಕೋಟಿ ರೂ. ಇದೆ. ಹಾಗಾದರೆ ಈ ವ್ಯತ್ಯಾಸ ಸೃಷ್ಟಿ ಮಾಡಿರುವುದು ಯಾರು? ನನ್ನ ಪ್ರಕಾರ ರಾಜ್ಯ ಸರ್ಕಾರ ಸಾಲ ಕಡಿಮೆ ಇದೆ ಎಂದು ತೋರಿಸಲು ಸುಳ್ಳು ಲೆಕ್ಕ ನೀಡಿದಂತಿದೆ.

See also  ವಿಜಯಪುರ: ಕೊನೆಗೂ ಬಂತು ವಿಜಯಪುರ-ದೆಹಲಿ ರೈಲು

ಕೇಂದ್ರ ಸರ್ಕಾರ ರಾಜ್ಯಗಳ ಸಾಲದ ಬಗ್ಗೆ ನೀಡಿರುವ ಅಂಕಿಅಂಶಗಳು ಮತ್ತು ಕರ್ನಾಟಕ ಸರ್ಕಾರ ಬಜೆಟ್‌ ಪುಸ್ತಕದಲ್ಲಿ ನೀಡಿರುವ ಅಂಕಿಅಂಶಗಳಲ್ಲಿ ವ್ಯತ್ಯಾಸ ಇದೆ. ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಸಾಲ 6 ಲಕ್ಷದ 18 ಸಾವಿರ ಕೋಟಿಗಿಂತ ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೆ, ರಾಜ್ಯ ಸರ್ಕಾರ 5 ಲಕ್ಷದ 64 ಸಾವಿರ ಕೋಟಿ ಆಗುತ್ತದೆ ಎಂದಿದ್ದಾರೆ. ಇವರೆಡರ ನಡುವಿನ ವ್ಯತ್ಯಾಸ 53,472 ಕೋಟಿ ರೂ. ಇಬ್ಬರಲ್ಲಿ ಯಾರು ಸುಳ್ಳು ಮಾಹಿತಿ ನೀಡಿದ್ದಾರೆ ಗೊತ್ತಿಲ್ಲ, ಈ ವ್ಯತ್ಯಾಸ ಸತ್ಯವೇ ಆಗಿದ್ದರೆ ಅನೇಕ ಅಂಕಿಅಂಶಗಳು ಕೂಡ ವ್ಯತ್ಯಾಸ ಆಗುತ್ತದೆ. ರಾಜ್ಯ ಸರ್ಕಾರ ಮಾಡಿರುವ ಸಾಲ ಜಿಎಸ್‌ಡಿಪಿಯ 24.20% ಇದೆ, ಇದು ವಿತ್ತೀಯ ಹೊಣೆಗಾರಿಕೆ ನೀತಿಯ ಮಾನದಂಡಗಳ ಒಳಗಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಲೆಕ್ಕದಂತೆ ಸಾಲ ಹೆಚ್ಚಾದರೆ 26% ಗಿಂತ ಹೆಚ್ಚಾಗುತ್ತದೆ. 2018ರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯನವರ ವಚನ
“ಅಂಧಕನ ಕೈನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳಲೆ ಮರುಳೆ
ತೊರೆಯಲಿದ್ದವನನೀಸರಿಯದವ
ತೆಗೆವ ತೆರನಂತೆಂದನಂಬಿಗ ಚೌಡಯ್ಯ” ನೆನಪಿಗೆ ಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಬ್ಬರು ಕಣ್ಣು ಕಾಣದವರು ಒಬ್ಬರ ಕೈ ಮತ್ತೊಬ್ಬರು ಹಿಡಿದಂತೆ ಕಾಣುತ್ತಿದೆ.

ಸಾಲ ಹೆಚ್ಚಾಗಲು ಕಾರಣಗಳೇನು? ಇಷ್ಟು ಸಾಲ ಮಾಡುವ ಅಗತ್ಯವೇನಿದೆ? ಎಂಬುದನ್ನು ಹೇಳಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ನಿಧಿಯಿಂದ ಹಣ ನೀಡಿದ್ದಾರೆ, ಇದು ಸರ್ಕಾರದಿಂದ ಕೊಡುವ ಹಣ ಅಲ್ಲ. ಅದನ್ನು ಕಳೆದರೆ ಕೊರೊನಾ ನಿರ್ವಹಣೆಗೆ ಸರ್ಕಾರ ಖರ್ಚು ಮಾಡಿರುವುದು 9,000 ಇರಬಹುದು. ಇದರಲ್ಲೂ ಲಂಚ ಹೊಡೆಯಲಾಗಿದೆ. ಪ್ರವಾಹಕ್ಕೆ 6,000 ಕೋಟಿ ಹಣ ಖರ್ಚಾಗಿದೆ. ಒಟ್ಟು 15,000 ಕೋಟಿ ಹಣ ಖರ್ಚಾಗಿರಬಹುದು. ಬಜೆಟ್‌ ಗಾತ್ರ 2,89,000 ಕೋಟಿ. ಮುಂದಿನ ವರ್ಷಕ್ಕೆ 3 ಲಕ್ಷದ 9 ಸಾವಿರ ಕೋಟಿ ಆಗಿದೆ. ಪ್ರವಾಹ ಮತ್ತು ಕೊರೊನಾದಿಂದ ಸಾಲ ಮಾಡಬೇಕಾಗಿ ಬಂದಿದೆ ಎಂಬುದು ಸೂಕ್ತ ಕಾರಣವಾಗಲಾರದು.

ಪ್ರತೀ ವರ್ಷ ಸಹಾಯಧನವನ್ನು, ವೇತನಾನುದಾನವನ್ನು, ಪಿಂಚಣಿಯನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡುವುದನ್ನು ಸರ್ಕಾರ ಕಡಿಮೆ ಮಾಡುತ್ತಲೇ ಬಂದಿದೆ. 2018ರಲ್ಲಿ ವೇತನಾನುದಾನ ಮತ್ತು ಆರ್ಥಿಕ ನೆರವಿನ ಪ್ರಮಾಣ 23,323 ಕೋಟಿ. 2022-23ರಲ್ಲಿ ಇದು 7,501 ಕೋಟಿ, 2023-24ರಲ್ಲಿ 8,882 ಕೋಟಿಗೆ ಇಳಿದಿದೆ. ಪ್ರತೀ ವರ್ಷ ಇದು ಕಡಿಮೆಯಾಗುತ್ತಿದೆ, ಆದರೆ ಸಾಲದ ಪ್ರಮಾಣ ಏರಿಕೆಯಾಗುತ್ತಿದೆ.

ಸಹಾಯಧನಗಳು 2018ರಲ್ಲಿ 23,330 ಕೋಟಿ ರೂ. ಇತ್ತು. 2022-23ರಲ್ಲಿ 30,000 2023-24ರಲ್ಲಿ 31,000 ಕೋಟಿ ಆಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ರೂ. 8,049 ಕೋಟಿ ಇದ್ದದ್ದು ಸ್ವಲ್ಪ ಮಾತ್ರ ಹೆಚ್ಚಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ 2018ರಲ್ಲಿ 31,072 ಕೋಟಿ ರೂ. ಇತ್ತು. 2022-23ರಲ್ಲಿ 21,866 ಕೋಟಿ, ಮುಂದಿನ ವರ್ಷ 20,920 ಕೋಟಿಗೆ ಇಳಿದಿದೆ. ಹೀಗೆ ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಅನುದಾನ 2018-19ರಲ್ಲಿ 82,998 ಕೋಟಿ ಇತ್ತು, ಅದು ಈ ವರ್ಷ 69,766 ಕೋಟಿ ಆಗಿದೆ, ಮುಂದಿನ ವರ್ಷಕ್ಕೆ 71,570 ಕೋಟಿ ಆಗಿದೆ. ಆದರೂ ಸಾಲದ ಪ್ರಮಾಣ ಹೆಚ್ಚಾಗುತ್ತಿರುವುದು ಯಾಕೆ?

ಕೃಷಿ, ಪಶು ಸಂಗೋಪನೆ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ನೀಡುತ್ತಿರುವ ಅನುದಾನವೂ ಕಡಿಮೆಯಾಗಿದೆ. ಹಾಲಿಗೆ ನೀಡುವ ಪ್ರೋತ್ಸಾಹಧನ 1400 ಕೋಟಿ ಇಂದ 1200 ಕೋಟಿಗೆ ಇಳಿದಿದೆ. ವಸತಿ ಇಲಾಖೆಯಲ್ಲಿ 2017-18ರಲ್ಲಿ 3,653 ಕೋಟಿ, 2020-21ರಲ್ಲಿ ಒಂದು ರೂಪಾಯಿ ಕೊಟ್ಟಿಲ್ಲ, 2022-23ರಲ್ಲಿ 1,053 ಕೋಟಿ, 2023-24ರಲ್ಲಿ 1500 ಕೋಟಿ ಅನುದಾನ ನೀಡಲಾಗಿದೆ. ಹೀಗೆ ಇಲಾಖೆಗಳಿಗೆ ನೀಡುವ ಅನುದಾನ ಕಡಿಮೆಯಾಗುತ್ತಿದೆ, ಬಜೆಟ್‌ ಗಾತ್ರ ಹೆಚ್ಚಾಗುತ್ತಿದೆ. ರಾಜ್ಯ ಅಭಿವೃದ್ಧಿ ಆಗುವುದು ಹೇಗೆ?

ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆ ಅನುದಾನ 2012-13ರಲ್ಲಿ ಬಜೆಟ್‌ ಗಾತ್ರ 1,04,023 ಕೋಟಿ. ಎಸ್‌,ಸಿ,ಪಿ ಗೆ ಹಂಚಿಕೆಯಾಗಿದ್ದು 5,125 ಕೋಟಿ, ಟಿ,ಎಸ್‌,ಪಿ ಗೆ ಹಂಚಿಕೆಯಾಗಿದ್ದದ್ದು 2,075 ಕೋಟಿ. ಒಟ್ಟು 7,200 ಕೋಟಿ ನೀಡಲಾಗಿತ್ತು. ನಮ್ಮ ಸರ್ಕಾರ ಕಾನೂನು ಜಾರಿಗೆ ತಂದ ಮೇಲೆ 2013-14ರಲ್ಲಿ ಬಜೆಟ್‌ ಗಾತ್ರ 1,21,660 ಕೋಟಿ. ಎಸ್‌,ಸಿ,ಪಿ ಗೆ ಖರ್ಚು ಮಾಡಿದ್ದು 6,135 ಕೋಟಿ. ಟಿ,ಎಸ್‌,ಪಿ ಖರ್ಚು ಮಾಡಿದ್ದು 2,480 ಕೋಟಿ. ಒಟ್ಟು 8,616 ಕೋಟಿ. ಪೂರ್ಣ ಪ್ರಮಾಣದಲ್ಲಿ ಕಾನೂನು ಜಾರಿಯಾದ ಮೇಲೆ ಬಜೆಟ್‌ ಗಾತ್ರ 1,38,008 ಕೋಟಿ, ಇದರಲ್ಲಿ ಎಸ್‌,ಸಿ,ಪಿ ಗೆ ಹಂಚಿಕೆಯಾಗಿದ್ದು 11,518 ಕೋಟಿ. ಟಿ,ಎಸ್‌,ಪಿ ಗೆ ಹಂಚಿಕೆಯಾಗಿದ್ದದ್ದು 4,315 ಕೋಟಿ. ಈ ಕಾನೂನು ಬಂದಿದ್ದರಿಂದ ಒಮ್ಮೆಲೆ 15,834 ಕೋಟಿಗೆ ಏರಿಕೆಯಾಯಿತು. ಸುಮಾರು 7 ಸಾವಿರ ಕೋಟಿ ಹೆಚ್ಚಾಯಿತು. 2018-19ರ ನಮ್ಮ ಸರ್ಕಾರದ ಕಡೆ ಬಜೆಟ್‌ ಗಾತ್ರ 2.02 ಲಕ್ಷ ಕೋಟಿ ಇತ್ತು, ಎಸ್‌,ಸಿ,ಪಿ ಗೆ ಹಂಚಿಕೆಯಾಗಿದ್ದು 20,940 ಕೋಟಿ, ಟಿ,ಎಸ್‌,ಪಿ ಗೆ ಹಂಚಿಕೆಯಾಗಿದ್ದದ್ದು 8,750 ಕೋಟಿ. ಒಟ್ಟು 29,605 ಕೋಟಿ ಹಂಚಿಕೆ ಮಾಡಲಾಗಿತ್ತು. 2022-23ರ ಬಜೆಟ್‌ ಗಾತ್ರ 2,89,653 ಕೋಟಿ. ಎಸ್‌,ಸಿ,ಪಿ / ಟಿ,ಎಸ್‌,ಪಿ ಗೆ ಹಂಚಿಕೆಯಾಗಿದ್ದದ್ದು 28,234 ಕೋಟಿ. ಇದು 2018-19ರಲ್ಲಿ ಇಟ್ಟದ್ದಕ್ಕಿಂತ ಕಡಿಮೆಯಾಗಿದೆ. ಮುಂದಿನ ಸಾಲಿನ ಬಜೆಟ್‌ ಗಾತ್ರ 3,09,181 ಕೋಟಿ. ಎಸ್‌,ಸಿ,ಪಿ ಗೆ ನೀಡಿರುವುದು 21,343 ಕೋಟಿ, ಟಿ,ಎಸ್‌,ಪಿ ಗೆ ನೀಡಿರುವುದು 8,872 ಕೋಟಿ. ಒಟ್ಟು 30,215 ಕೋಟಿ. ಬಜೆಟ್‌ ಗಾತ್ರ 2.02 ಲಕ್ಷ ಕೋಟಿ ಇದ್ದಾಗ 29,691 ಕೋಟಿ ಇತ್ತು. ಈಗಿನ ಬಜೆಟ್‌ ಗಾತ್ರ 1.07 ಲಕ್ಷ ಕೋಟಿ ಹೆಚ್ಚಾಗಿದೆ, ಈ ಯೋಜನೆಗೆ ನೀಡಿರುವ ಅನುದಾನ ಬಿಡಿಗಾಸು ಹೆಚ್ಚಾಗಿದೆ. ನನ್ನ ಪ್ರಕಾರ ಕನಿಷ್ಠ 50,000 ಕೋಟಿ ಆಗಬೇಕಿತ್ತು. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಈ ಸರ್ಕಾರ ದ್ರೋಹ ಮಾಡಿದೆ. 2008ರಿಂದ 2013ರ ವರೆಗೆ ಎಸ್‌,ಸಿ,ಪಿ/ಟಿ,ಎಸ್‌,ಪಿ ಗೆ ಖರ್ಚು ಮಾಡಿದ್ದ ಒಟ್ಟು ಹಣ 22,261 ಕೋಟಿ. ಕಾನೂನು ಜಾರಿ ಮಾಡಿದ ನಂತರ ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಖರ್ಚಾದದ್ದು 88,395 ಕೋಟಿ. 2018ರ 5 ವರ್ಷಗಳ ನಂತರ ಬಜೆಟ್‌ ಗಾತ್ರ 1 ಲಕ್ಷದ 7 ಸಾವಿರ ಕೋಟಿ ಹೆಚ್ಚಾಗಿದ್ದರೂ ಎಸ್‌,ಸಿ,ಪಿ/ಟಿ,ಎಸ್‌,ಪಿ ಗೆ ನೀಡಿರುವ ಅನುದಾನ 523 ಕೋಟಿ ಮಾತ್ರ ಹೆಚ್ಚಾಗಿದೆ.

2013-14ರಿಂದ 2017-18 ರ ವರೆಗಿನ 5 ವರ್ಷಗಳ ಬಜೆಟ್‌ ನ ಒಟ್ಟು ಗಾತ್ರ 7,52,133 ಕೋಟಿ. ಎಸ್‌,ಸಿ,ಪಿ/ಟಿ,ಎಸ್‌,ಪಿ ಹೊರತುಪಡಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಿರುವ ಅನುದಾನ 40,778 ಕೋಟಿ. 2019-20 ರಿಂದ 2022-23 ರ ವರೆಗೆ 4 ವರ್ಷಗಳ ಬಜೆಟ್‌ ಗಾತ್ರದ ಒಟ್ಟು ಮೊತ್ತ 10,06,896 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಿರುವ ಅನುದಾನ 38,034 ಕೋಟಿ. ಅಂದರೆ 6 ಸಾವಿರ ಕೋಟಿ ಅನುದಾನ ಕಡಿಮೆಯಾಗಿದೆ. 2018ರ ಬಜೆಟ್‌ ನಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 3,150 ಕೋಟಿ ಅನುದಾನ ನೀಡಿದ್ದೆವು. ಇಂದು 1471 ಕೋಟಿಗೆ ಇಳಿಕೆಯಾಗಿದೆ.

ತಾಂಡಗಳು, ಮಜರೆಗಳು, ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದು ನಾವು. ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ, ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದೆವು. ಉಳುವವನೆ ಭೂಮಿಯ ಒಡೆಯ ಮಾದರಿಯಲ್ಲಿ ವಾಸಿಸುವವನೆ ಮನೆಯೊಡೆಯ ಎಂಬ ಕಾನೂನನ್ನು 27-03-2017ರಲ್ಲಿ ಮಾಡಿದ್ವಿ. ಈಗ ಪ್ರಧಾನಿ ಮೋದಿ ಅವರನ್ನು ಕರೆದುಕೊಂಡು ಬಂದು ಹಕ್ಕು ಪತ್ರ ಕೊಡಿಸಿ ಕಾನೂನು ನಾವು ಮಾಡಿದ್ದು ಎಂದು ಕೆಲಸದ ಶ್ರೇಯ ತೆಗೆದುಕೊಂಡಿದ್ದಾರೆ.

See also  ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಇರುತ್ತದೆ :ಸಚಿವ ಪ್ರಹ್ಲಾದ್‌ ಜೋಶಿ

ಮುಂದಿನ ವರ್ಷದ ಕೊನೆಗೆ 5.65 ಲಕ್ಷ ಕೋಟಿ ಸಾಲ ಆಗಲಿದೆ. ಅಸಲು ಮತ್ತು ಬಡ್ಡಿ ರೂಪದಲ್ಲಿ 56,000 ಕೋಟಿ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಸಾಲ ಯಾಕೆ ಹೆಚ್ಚಾಗಿದೆ ಎಂದರೆ 40% ಕಮಿಷನ್‌ ನಿಂದ. 100 ರೂಪಾಯಿಯ ಒಂದು ಯೋಜನೆಯಲ್ಲಿ 40 ರೂಪಾಯಿ ಕಮಿಷನ್‌ ಗೆ ಹೋದರೆ, 18% ಜಿಎಸ್‌ಟಿ, ಗುತ್ತಿಗೆದಾರರ ಲಾಭ 20% ಆದರೆ ಉಳಿಯುವುದು 22 ರೂಪಾಯಿ. ಹೀಗಾದರೆ ದುಡ್ಡು ಖಾಲಿಯಾಗುತ್ತದೆ, ಗುಣಮಟ್ಟದ ಕೆಲಸ ಆಗಲ್ಲ.

ಕೆಲವು ದಿನದ ಹಿಂದೆ ಪತ್ರಿಕೆಯೊಂದರಲ್ಲಿ ಬಂದ ವರದಿ ಓದಿದ್ದೆ, ಬೆಂಗಳೂರಿನಲ್ಲಿ 25,000 ರಸ್ತೆ ಗುಂಡಿಗಳು ಇದ್ದಾವೆ, ಅದನ್ನು ಮುಚ್ಚಲು 7,200 ಕೋಟಿ ಖರ್ಚು ಮಾಡಿದ್ದಾರೆ. ಅಂದರೆ ಒಂದು ಗುಂಡಿ ಮುಚ್ಚಲು ಲಕ್ಷಗಟ್ಟಲೆ ಹಣ ಬೇಕ?

ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ನಮಗೆ ದೊಡ್ಡ ಅನ್ಯಾಯವಾಗುತ್ತಿದೆ. 2017-18ರಲ್ಲಿ ಕೇಂದ್ರ ಸರ್ಕಾರದಿಂದ ನಮಗೆ ಬರುವ ನಮ್ಮ ತೆರಿಗೆ ಪಾಲು 31,752 ಕೋಟಿ. 2022-23ರಲ್ಲಿ 34,596 ಕೋಟಿ, ಮುಂದಿನ ವರ್ಷ 37,252 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬರುವ ಹಣ 2017-18ರಲ್ಲಿ 12,389 ಕೋಟಿ ಇತ್ತು. 2022-23ರಲ್ಲಿ 12,391 ಕೋಟಿ. ಮುಂದಿನ ವರ್ಷಕ್ಕೆ 13,005 ಕೋಟಿ. ನಮಗೆ ಒಟ್ಟು ನಮ್ಮ ತೆರಿಗೆ ಪಾಲು, ಕೇಂದ್ರದ ಸಹಾಯಧನ ಸೇರಿ 50,257 ಕೋಟಿ.

2017-18ರಲ್ಲಿ ಕೇಂದ್ರ ಸರ್ಕಾರದ ಬಜೆಟ್‌ ಗಾತ್ರ 24,42,000 ಕೋಟಿ. ಆಗ ರಾಜ್ಯಕ್ಕೆ ಹಂಚಿಕೆಯಾದ ತೆರಿಗೆ 35,895 ಕೋಟಿ. ಕೇಂದ್ರ ನೀಡಿದ್ದ ಅನುದಾನ 16,082 ಕೋಟಿ. ಒಟ್ಟು 51,977 ಕೋಟಿ ಬಂದಿತ್ತು. 2019-20ರಲ್ಲಿ ಕೇಂದ್ರ ಸರ್ಕಾರದ ಬಜೆಟ್‌ ಗಾತ್ರ 27,86,349 ಕೋಟಿ. ಆಗ ರಾಜ್ಯಕ್ಕೆ ಹಂಚಿಕೆಯಾದ ತೆರಿಗೆ 30,919 ಕೋಟಿ. ಕೇಂದ್ರ ನೀಡಿದ್ದ ಅನುದಾನ 19,839 ಕೋಟಿ. ಒಟ್ಟು 50,758 ಕೋಟಿ. ಕೇಂದ್ರದ ಬಜೆಟ್ ಗಾತ್ರ 3 ಲಕ್ಷ ಕೋಟಿ ಹೆಚ್ಚಾದರೂ ರಾಜ್ಯಕ್ಕೆ ಸಿಕ್ಕ ಅನುದಾನ ತುಂಬ ಕಡಿಮೆಯಿದೆ.
ಈ ವರ್ಷದ ಕೇಂದ್ರದ ಬಜೆಟ್‌ ಗಾತ್ರ 45,03,097 ಕೋಟಿ ಇದೆ. ನಮಗೆ ಬರುವ ತೆರಿಗೆ ಪಾಲು 37,252 ಕೋಟಿ. ಕೇಂದ್ರದಿಂದ ಬರುವ ಅನುದಾನ 13,005 ಕೋಟಿ. ಒಟ್ಟು 50,257 ಕೋಟಿ. ಕೇಂದ್ರದ ಬಜೆಟ್‌ ಸುಮಾರು 20 ಲಕ್ಷ ಕೋಟಿ ಹೆಚ್ಚಾಗಿದೆ ಆದರೆ ರಾಜ್ಯಕ್ಕೆ ಬರುವ ಅನುದಾನ ಕಡಿಮೆ ಆಗಿದೆ. ಮಾತೆತ್ತಿದರೆ ನಮ್ಮದು ಡಬಲ್‌ ಇಂಜಿನ್‌ ಸರ್ಕಾರ ಎನ್ನುತ್ತಾರೆ, ಆದರೆ ನಿಜವಾಗಿ ನಮಗೆ ಈ ಸರ್ಕಾರದಿಂದ ಅನ್ಯಾಯ ಆಗಿರುವುದು ಹೆಚ್ಚು. ಇದರಿಂದಾಗಿ ಸಾಲ ಹೆಚ್ಚಾಗಿದೆ.

ಕನಿಷ್ಠ 1 ಲಕ್ಷದ 4 ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಿತ್ತು. 50,000 ಕೋಟಿ ಅಷ್ಟೆ ಬರುತ್ತಿದೆ. 14ನೇ ಹಣಕಾಸು ಆಯೋಗದಲ್ಲಿ ನಮಗೆ 42% ಪಾಲು ನೀಡಿದ್ದರು. ಇದನ್ನೇ ಲೆಕ್ಕ ಹಾಕಿದರೆ ನಮಗೆ 2 ಲಕ್ಷ ಕೋಟಿ ಬರಬೇಕು.

ಅವೈಜ್ಞಾನಿಕ ಜಿಎಸ್‌ಟಿ ಜಾರಿ ಮಾಡಿರುವುದು ಸಾಲ ಹೆಚ್ಚಾಗಲು ಕಾರಣಗಳಲ್ಲಿ ಒಂದು. ಜಿಎಸ್‌ಟಿ ಬರುವ ಮೊದಲು 14% ನಮ್ಮ ತೆರಿಗೆ ಬೆಳವಣಿಗೆ ಇತ್ತು. ಈಗ ಮುಖ್ಯಮಂತ್ರಿಗಳು 26% ತೆರಿಗೆ ಬೆಳವಣಿಗೆ ಇದೆ ಎಂದಿದ್ದಾರೆ ಆದರೆ ಸಾಲ 77,750 ಕೋಟಿ ಮಾಡಿದ್ದಾರೆ. ರಾಜ್ಯದಿಂದ ವಸೂಲಾಗುವ ತೆರಿಗೆ 2023-24ರಲ್ಲಿ ಸುಮಾರು 4 ಲಕ್ಷದ 72 ಸಾವಿರ ಕೋಟಿ. ನಮಗೆ ಬರುವುದು 50,000 ಕೋಟಿ ಮಾತ್ರ. ನಮಗೆ ಕೊಡಬೇಕಿದ್ದ ಹಣವನ್ನು ಬೇರೆ ರಾಜ್ಯಗಳಿಗೆ ಕೊಡುತ್ತಿದ್ದಾರೆ. 2 ಲಕ್ಷದ 40 ಸಾವಿರ ಕೋಟಿ ನೇರ ತೆರಿಗೆ, 1.03 ಲಕ್ಷ ಕೋಟಿ ಜಿಎಸ್‌ಟಿ, 45,000 ಕೋಟಿ ಅಬಕಾರಿ ಸುಂಕ, 30,000 ಕೋಟಿ ಪೆಟ್ರೋಲ್‌ ಡೀಸೆಲ್‌ ಮೇಲಿನ ಸೆಸ್‌, ಸಬ್‌ ಚಾರ್ಜ್‌ ಇದಲ್ಲದೆ ಟೋಲ್‌ ಗಳಿಂದ ರೈಲ್ವೇ ಇವುಗಳಿಂದ ಒಟ್ಟು ಸಂಗ್ರಹವಾಗುವುದು 4,72,000 ಕೋಟಿ ನಮ್ಮ ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ಸಂಗ್ರಹವಾಗುತ್ತದೆ.

ಅಸಲು ಮತ್ತು ಬಡ್ಡಿ ರೂಪದಲ್ಲಿ ಸಾಲದ ಮರುಪಾವತಿ ಹೆಚ್ಚಾಗುತ್ತಿರುವುದರಿಂದ ಮತ್ತೆ ಸಾಲ ಹೆಚ್ಚಾಗುತ್ತಿದೆ. 2022-23ರಲ್ಲಿ ಬಜೆಟ್‌ ಗಾತ್ರ 2.65 ಲಕ್ಷ ಕೋಟಿ, ರಾಜ್ಯ ಮಾಡಿರುವ ಸಾಲ 67,180 ಕೋಟಿ. ಬಡ್ಡಿ ಪಾವತಿ 29,395, ಅಸಲು ಪಾವತಿ 14,178 ಕೋಟಿ ಒಟ್ಟು 43,573 ಕೋಟಿ ಅಸಲು ಬಡ್ಡಿ ಕಟ್ಟಬೇಕು.

ಮುಂದಿನ ವರ್ಷದ ಬಜೆಟ್‌ ಗಾತ್ರ 3.09 ಲಕ್ಷ ಕೋಟಿ, ರಾಜ್ಯ ಮಾಡುವ ಸಾಲ 77,750 ಕೋಟಿ. ಬಡ್ಡಿ ಪಾವತಿ 34,023 ಕೋಟಿ, ಅಸಲು ಪಾವತಿ 22,470 ಕೋಟಿ ಒಟ್ಟು 56,463 ಕೋಟಿ ಕಟ್ಟಬೇಕಾಗುತ್ತದೆ. ಈಗ ರಾಜಸ್ವ ಸಂಗ್ರಹ 2 ಲಕ್ಷದ 26 ಸಾವಿರ ಕೋಟಿ ಇದೆ. ಸಾಲದ ಅಸಲು ಮತ್ತು ಬಡ್ಡಿ ಪಾವತಿ 56,463 ಕೋಟಿ, ಇದರ ಪ್ರಮಾಣ 25% ಆಗುತ್ತದೆ.

ಮನಮೋಹನ್‌ ಸಿಂಗ್‌ ಅವರ ಸರ್ಕಾರದ ಅವಧಿಯಲ್ಲಿ ಕಾರ್ಪೊರೆಟ್‌ ತೆರಿಗೆ 30% ಇತ್ತು, ಈಗ ಅದನ್ನು 22% ಗೆ ಇಳಿಕೆ ಮಾಡಿದ್ದಾರೆ. ಕಳೆದ 7 ವರ್ಷಗಳಲ್ಲಿ 700 ಬಂಡವಾಳಶಾಹಿಗಳ 20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ ಮನಮೋಹನ್‌ ಸಿಂಗ್‌ ಅವರ ಸರ್ಕಾರದ ಕೊನೆ ವರೆಗೆ ದೇಶದ ಮೇಲಿದ್ದ ಒಟ್ಟು ಸಾಲ 53 ಲಕ್ಷ ಕೋಟಿ. ಈ ವರ್ಷದ ಕೇಂದ್ರ ಬಜೆಟ್‌ ನಲ್ಲಿ ಹೇಳಿದಂತೆ ಇರುವ ಒಟ್ಟು ಸಾಲ 175 ಲಕ್ಷ ಕೋಟಿ. ಅಂದರೆ 122 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ.

ಕರ್ನಾಟಕದಲ್ಲಿ 2014 ಮಾರ್ಚ್‌ ವರೆಗೆ ಇದ್ದ ರಾಷ್ಟ್ರೀಯ ಹೆದ್ದಾರಿ 6,177 ಕಿ.ಮೀ. 2022ರ ಮಾರ್ಚ್‌ ನಲ್ಲಿ 7656 ಕಿ,ಮೀ. ಕಳೆದ 9 ವರ್ಷದಲ್ಲಿ ಮಾಡಿರುವ ಹೆದ್ದಾರಿ 1479 ಕಿ.ಮೀ. ಬಸವರಾಜ ಬೊಮ್ಮಾಯಿ ಅವರು 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೆ 64,512 ಕೋಟಿ ರೂ ವೆಚ್ಚದಲ್ಲಿ 6,715 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ನಾನು ಸುಳ್ಳು ಲೆಕ್ಕ ಹೇಳುತ್ತಿದ್ದಾರೆ ಎಂದು ಹೇಳಿದ್ದು.
2014ರ ಮಾರ್ಚ್‌ ನಲ್ಲಿ 6200 ಕಿ.ಮೀ ರಾಜ್ಯ ಹೆದ್ದಾರಿ ಇತ್ತು, ರೈಲ್ವೇ ಉದ್ದ 3281 ಕಿ.ಮೀ ಇತ್ತು. 2022ರ ಮಾರ್ಚ್‌ ನಲ್ಲಿ 7656 ಕಿ.ಮೀ ರಾಜ್ಯ ಹೆದ್ದಾರಿ, 3572 ಕಿ.ಮೀ ಗೆ ರೈಲ್ವೇ ಮಾರ್ಗ ಹೆಚ್ಚಾಗಿದೆ.

ಕೇಂದ್ರ ಸರ್ಕಾರ 9-2-2023ರಲ್ಲಿ ಉತ್ತರ ನೀಡುವಾಗ ಏನು ಹೇಳಿದೆ? ಮೇಕೆದಾಟು ಯೋಜನೆಗೆ ಕಳೆದ ಬಾರಿ 1000 ಕೋಟಿ ಇಟ್ಟು, ಈ ಬಾರಿ ಒಂದು ರೂಪಾಯಿ ಯಾಕೆ ಕೊಟ್ಟಿಲ್ಲ? ನಾವು ಪಾದಯಾತ್ರೆ ಮಾಡಿದ್ದಕ್ಕೆ ಇಟ್ಟಿದ್ದ? ಕಾವೇರಿ ನೀರಾವರಿ ಪ್ರಾಧಿಕಾರದವರು ಮೇಕೆದಾಟು ಡಿ.ಪಿ.ಆರ್‌ ಕುರಿತು ಚರ್ಚೆ ಮಾಡಿದ್ದಾರ?

ಕೇಂದ್ರದ ವಿಶ್ವೇಶ್ವರ ಟೂಡು ಅವರು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಈ ತಿಂಗಳ 9ನೇ ತಾರೀಖು ಉತ್ತರ ನೀಡಿದ್ದು, 2019ರಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ಡಿಪಿಆರ್‌ ಅನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಅಂಗೀಕಾರ ಮಾಡಿಲ್ಲ ಎಂದು ಹೇಳಿದ್ದಾರೆ.

ಎತ್ತಿನಹೊಳೆ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸಿಡಬ್ಲ್ಯುಸಿ ಅವರು ಕೇಳಿದ ಮಾಹಿತಿಯನ್ನು ನೀಡಿಲ್ಲ ಎಂಬ ಕಾರಣಕ್ಕೆ ಯೋಜನೆಯ ಮನವಿಯನ್ನೇ ತೆಗೆದುಹಾಕಿದ್ದಾರೆ. ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ, ನಮಗೆ ಯಾವ ಮಾಹಿತಿಯನ್ನು ನೀಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಳಸಾ ಬಂಡೂರಿ ಯೋಜನೆಗೆ ಪರಿಸರ ಅನುಮತಿ ಮತ್ತು ಅರಣ್ಯ ಅನುಮತಿ ಸಿಕ್ಕಿಲ್ಲ. ರಾಜ್ಯ ಸರ್ಕಾರದ ತಪ್ಪುಗಳಿಂದಾಗಿ ಅನೇಕ ಯೋಜನೆಗಳು ಜಾರಿಯಾಗಿಲ್ಲ. ಭದ್ರಾ ಮೇಲ್ದಂಡೆಗೆ 5300 ಕೋಟಿ ಅನುದಾನ ನೀಡಿದ್ದಾರೆ, ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿಲ್ಲ.

ಪಸ್ತುತ ಬಜೆಟ್‌ ಸಾಲದ ಸುಳಿಯಲ್ಲಿ ರಾಜ್ಯವನ್ನು ಸಿಕ್ಕಿಸಿದೆ. 4 ವರ್ಷದಲ್ಲಿ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಸಿದ್ದರಾಮಯ್ಯ ಅವರು ಸಾಲ ಮಾಡಿ ತುಪ್ಪ ತಿಂದಿದ್ದಾರೆ ಎಂದು ನಮಗೆ ಹೇಳುತ್ತಿದ್ದವರು ಈಗ ಮಾಡಿರುವುದೇನು? ಬಜೆಟ್‌ ನ ಎಲ್ಲಿಯೂ ಬದ್ಧ ಖರ್ಚು ಎಷ್ಟಾಗಿದೆ ಎಂದು ಹೇಳಿಲ್ಲ. ಈ ಬಜೆಟ್‌ ರೈತರು, ಬಡವರು, ಮಕ್ಕಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗಗಳ ಜನರ ವಿರೋಧಿಯಾಗಿದೆ. ಹಾಗಾಗಿ ಈ ಬಜೆಟ್‌ ಅನ್ನು ತೀವ್ರವಾಗಿ ವಿರೋಧ ಮಾಡುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು