ಚಿಕ್ಕಬಳ್ಳಾಪುರ : ಕೇರಳದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಜಿಲ್ಲೆಗಳಲ್ಲಿ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಪ್ರತಿ ದಿನ ಗಡಿ ಜಿಲ್ಲೆಗಳಿಗೆ ಬರುವ ಜನರಿಗೆ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಲಾಗುವುದು” ಎಂದರು.
“ಕೇರಳದಿಂದ ಪ್ರತಿ ದಿನ ಅನೇಕರು ಗಡಿ ಜಿಲ್ಲೆಗಳಿಗೆ ಬರುತ್ತಾರೆ. ಶಿಕ್ಷಣ, ಆರೋಗ್ಯ ಸೇವೆ, ನಿತ್ಯದ ವಹಿವಾಟುಗಳಿಗೆ ದಕ್ಷಿಣ ಕನ್ನಡ, ಉಡುಪಿ ಮೊದಲಾದ ಜಿಲ್ಲೆಗಳಿಗೆ ಜನರು ಬರುತ್ತಾರೆ. ಇನ್ನು ವಿಮಾನ, ರೈಲುಗಳ ಮೂಲಕ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕಿದೆ. ಇದಕ್ಕಾಗಿ ಕೋವಿಡ್ ಮಾರ್ಗಸೂಚಿ ರೂಪಿಸಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.