ಕೋಲಾರ: ಇಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ನೇತಾಜಿ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದವರು. ಮಹಾತ್ಮ ಗಾಂಧಿ ಅವರು ಅಹಿಂಸೆಯ ಹಾದಿಯಲ್ಲಿ ಸ್ವಾತಂತ್ರ್ಯ ಪಡೆಯುವ ಪ್ರಯತ್ನ ಮಾಡಿದರೆ, ಬೋಸ್ ಅವರು ಬ್ರಿಟೀಷರ ವಿರುದ್ಧ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆಯಬೇಕೆಂದು ನಂಬಿದ್ದರು. ಇದೊಂದೆ ಗಾಂಧಿ ಅವರಿಗೂ ಬೋಸ್ ರಿಗೂ ಇರುವ ಭಿನ್ನಾಭಿಪ್ರಾಯ. ಇಂದು ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಹೋರಾಟಗಳಿಂದ ನಾವೆಲ್ಲರು ಸ್ಪೂರ್ತಿಯನ್ನು ಪಡೆಯೋಣ, ಪ್ರತಿಯೊಬ್ಬ ಭಾರತೀಯನಿಗೂ ದೇಶ ಮೊದಲು, ನಂತರ ನಾವು. ದೇಶದ ಜನರ ಬಗ್ಗೆ ಪ್ರೀತಿ, ವಿಶ್ವಾಸವನ್ನು ಬೆಳೆಸಿಕೊಳ್ಳೋಣ ಎಂದು ಆಶಿಸುತ್ತೇನೆ.
ಕೋಲಾರ ಜಿಲ್ಲೆಗೆ ಲಕ್ಷ್ಮೀನಾರಾಯಣ ಅವರು ಹೊಸದಾಗಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ, ಊರುಬಾಗಿಲು ಶ್ರೀನಿವಾಸ್ ಅವರು ಕಾರ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಇಬ್ಬರಿಗೂ ಪಕ್ಷದ ಪರವಾಗಿ ಅಭಿನಂದನೆಗಳು. ಇವರ ನಾಯಕತ್ವದಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರದಿಂದ 6ಕ್ಕೆ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸುತ್ತೇನೆ.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲು ಆರಂಭವಾಗಿದೆ, ಇದರಿಂದ ಹೆದರಿರುವ ಬಿಜೆಪಿಯವರು ವಾರಕ್ಕೊಮ್ಮೆ ಮೋದಿ ಅವರನ್ನು ಕರೆಸಲು ಶುರುಮಾಡಿದ್ದಾರೆ. ಬಿಜೆಪಿಯ ಬಂಡವಾಳ ಮೋದಿ ಅವರು. ಮೋದಿ ಅವರು ಮತ್ತೊಮ್ಮೆ ತಮಗೆ ಅಧಿಕಾರ ಕೊಡಿಸುತ್ತಾರೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನೂರು ಬಾರಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದರೂ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.
ನಾವು ಈಗಾಗಲೇ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಈ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚು ಜನರು ಸೇರುವ ಜೊತೆಗೆ ಕಾರ್ಯಕರ್ತರ ಉತ್ಸಾವವನ್ನು ನೋಡಿದರೆ ನಮ್ಮ ನಿರೀಕ್ಷೆಗಿಂತ ಹೆಚ್ಚು ಪ್ರತಿಕ್ರಿಯೆ ಕಂಡುಬರುತ್ತಿದೆ. ರಾಜ್ಯದ ಜನ ಬಿಜೆಪಿ ಆಡಳಿತದಿಂದ ನೊಂದಿದ್ದಾರೆ. ಇದರ ಜೊತೆಗೆ ಯಾವುದೇ ಕೆಲಸ ಆಗಬೇಕಾದರೂ ಲಂಚ ನೀಡಬೇಕು. ಬಿಜೆಪಿಯಂಥಾ ಭ್ರಷ್ಟ ಸರ್ಕಾರ ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಬಂದಿರಲಿಲ್ಲ. ಇದಕ್ಕೆ ಒಂದೂವರೆ ವರ್ಷದ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪ್ರತೀ ಗುತ್ತಿಗೆ ಕಾಮಗಾರಿಗಳಲ್ಲಿ 40% ಕಮಿಷನ್ ನೀಡಬೇಕಾಗಿದೆ, ಏನಾದರೂ ಮಾಡಿ ಇದನ್ನು ನಿಲ್ಲಿಸಿ ಎಂದು ಮನವಿ ಮಾಡಿರುವುದು ಸಾಕ್ಷಿ. ನ ಖಾವೂಂಗ, ನ ಖಾನೆದೂಂಗ ಎನ್ನುವ ಮೋದಿ ಅವರು ಒಂದುವರೆ ವರ್ಷದಿಂದ ಯಾಕೆ ಏನು ಕ್ರಮ ತೆಗೆದುಕೊಂಡಿಲ್ಲ. ಬಸವರಾಜ ಬೊಮ್ಮಾಯಿ ಅವರು ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಇರಲಿಲ್ವಾ ಎಂದು ಹೇಳುವ ಮೂಲಕ ಈಗ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ತನಿಖೆ ಮಾಡಿಸುವುದಾದರೆ ನಾವು ಅಗತ್ಯ ದಾಖಲಾತಿಗಳನ್ನು ಒದಗಿಸುತ್ತೇವೆ ಎಂದು ಕೆಂಪಣ್ಣ ಹೇಳಿದ್ದಾರೆ, ಬೊಮ್ಮಾಯಿ ಅವರಿಗೆ ತಾಕತ್ ಇದ್ದರೆ ಇದನ್ನು ತನಿಖೆ ಮಾಡಿಸಲಿ.
ನಾನು ಮೂರು ಬಾರಿ ಸರ್ಕಾರದ ಭ್ರಷ್ಟಾಚಾರದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಲು ಪ್ರಯತ್ನ ಮಾಡಿದ್ದೆ, ಆದರೆ ಸ್ಪೀಕರ್ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಲು ಅವಕಾಶವನ್ನೇ ನೀಡಲಿಲ್ಲ. ಕೊನೆ ದಿನದವರೆಗೂ ಅವಕಾಶ ಕೊಡದೆ, ಅಧಿವೇಶನ ಮುಂದೂಡಿಬಿಟ್ಟರು. ಇಂದು ನೇಮಕಾತಿ, ವರ್ಗಾವಣೆ, ಬಡ್ತಿ, ಟೆಂಡರ್ ಹೀಗೆ ಎಲ್ಲಾ ಕಡೆ ಲಂಚ ತುಂಬಿ ಹೋಗಿದೆ. ವಿಧಾನಸೌಧದ ಗೋಡೆಗಳು ಕೂಡ ಲಂಚ ಲಂಚ ಎಂದು ಪಿಸುಗುಟ್ಟುತ್ತವೆ. ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೆ, 13 ಬಜೆಟ್ ಗಳನ್ನು ಮಂಡಿಸಿದ್ದೇನೆ, 12 ವರ್ಷ ಹಣಕಾಸಿನ ಮಂತ್ರಿಯಾಗಿದ್ದೆ ಈ ಅವಧಿಯಲ್ಲಿ ಎನ್.ಒ.ಸಿ ರಿಲೀಸ್ ಮಾಡಲು ಒಂದು ರೂಪಾಯಿ ಲಂಚ ಕೇಳಿದ್ದೆ ಎಂದು ಯಾರಾದರೂ ಹೇಳಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ.
ದೇಶದ ಭವಿಷ್ಯ ರೂಪಿಸುವ ಯುವ ಜನರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಮೋದಿ ಅವರು ಹೇಳಿದ್ದರು, 18 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತಲ್ವಾ ಆಗಿದೆಯಾ? ನೆಹರು, ಇಂದಿರಾ ಗಾಂಧಿ, ಲಾಲ್ ಬಹದೂರ್ ಶಾಸ್ತ್ರಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅನೇಕ ಬಂದರುಗಳು, ವಿಮಾನ ನಿಲ್ದಾಣಗಳು, ಕೈಗಾರಿಕೆಗಳು, ಸರ್ಕಾರಿ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರು. ಮೋದಿ ಅವರು ಪ್ರಧಾನಿಯಾದ ಮೇಲೆ ಅವನ್ನೆಲ್ಲ ಮಾರಾಟ ಮಾಡಲು ಶುರು ಮಾಡಿದ್ದಾರೆ.
ಜೆಡಿಎಸ್ ಒಂದು ಅವಕಾಶವಾದಿ ಪಕ್ಷ. ಅವರು ಗೆದ್ದವರ ಜೊತೆ ಹೋಗುತ್ತಾರೆ. ಈ ಹಿಂದೆ ಕುಮಾರಸ್ವಾಮಿ ಅವರು 2 ವರ್ಷ 10 ತಿಂಗಳು ಮುಖ್ಯಮಂತ್ರಿಯಾಗಿದ್ದರು ಆಗ ಪಂಚರತ್ನ ನೆನಪಿಗೆ ಬರಲಿಲ್ವಾ? ರೈತರು ನೆನಪಾಗಲಿಲ್ವಾ? ನಾನು ಕೋಲಾರದ ಕೆರೆಗಳನ್ನು ತುಂಬಿಸಲು 1400 ಕೋಟಿ ಅನುದಾನ ನೀಡಿ, ಕೆ.ಸಿ ವ್ಯಾಲಿ ಯೋಜನೆ ಜಾರಿ ಮಾಡಿದ್ದೆ, ಇಂದು ಕೋಲಾರದಲ್ಲಿ ಹಸಿರು ಕಾಣುತ್ತಿದ್ದರೆ ಅದಕ್ಕೆ ಕೆ.ಸಿ ವ್ಯಾಲಿ ಕಾರಣ. ಅಂದು ನಾವು ಯೋಜನೆ ಜಾರಿ ಮಾಡಿದಾಗ ಈ ನೀರು ವಿಷ, ಇದರಿಂದ ರೈತರ ಬೆಳೆಗಳು ಹಾಳುಗುತ್ತದೆ ಎಂದು ವಿರೋಧ ಮಾಡಿದವರು ಇದೇ ಕುಮಾರಸ್ವಾಮಿ. ಎತ್ತಿನಹೊಳೆ ಯೋಜನೆಗೆ ಕೂಡ ಕುಮಾರಸ್ವಾಮಿ ವಿರೋಧ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಎತ್ತಿನಹೊಳೆ ಕೆಲಸ ನಿಂತಿದೆ, ನಾವು ಅಧಿಕಾರಕ್ಕೆ ಬಂದ ಮೇಲೆ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ. ಅಂದು ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆಗೆ ಗುದ್ದಲಿಪೂಜೆ ನೆರವೇರಿಸುವಾಗ ಕುಮಾರಸ್ವಾಮಿ ಅವರನ್ನು ಕರೆದರೆ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ, ಶಿವಲಿಂಗೇಗೌಡರು ಮಾತ್ರ ಬಂದಿದ್ದರು. ಇಂಥವರಿಗೆ ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?
ಹಾಲು ಉತ್ಪಾದನೆಯಲ್ಲಿ ಕೋಲಾರ ಎರಡನೇ ಸ್ಥಾನದಲ್ಲಿದೆ. ಕ್ಷೀರಧಾರೆ ಯೋಜನೆಯಡಿ ಪ್ರತೀ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದೆ. ಕುಮಾರಸ್ವಾಮಿ ಅವರು 6 ರೂ. ಕೊಡುತ್ತೇವೆ ಎಂದಿದ್ದರು ಆದರೆ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದಮೇಲೆ ಎಷ್ಟು ಹೆಚ್ಚು ಮಾಡಬೇಕು ಎಂದು ಚರ್ಚೆ ಮಾಡಿ ಹೈನುಗಾರರಿಗೆ ಖಂಡಿತಾ ಹೆಚ್ಚು ಸಹಾಯಧನ ಕೊಡುತ್ತೇವೆ. ನಾವು ನುಡಿದಂತೆ ನಡೆಯುವವರು. ಬಿಜೆಪಿ ಅವರು ರೈತರ ಸಾಲ ಮನ್ನಾ ಮಾಡಿಲ್ಲ, ಮೋದಿ ಅವರು ಅಂಬಾನಿ, ಅದಾನಿಯಂತ ಬಂಡವಾಳಶಾಹಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಅವರು ಬಡವರ ಸಾಲ ಮನ್ನಾ ಮಾಡಲ್ಲ. ಮನಮೋಹನ್ ಸಿಂಗ್ ಅವರು 78,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ರು. ನಾನು 8,165 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೆ.
ಕೋಲಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಡುವ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೆ, ನಾವು ಅಧಿಕಾರಕ್ಕೆ ಬಂದಮೇಲೆ ಖಂಡಿತಾ ಮಾಡಿಕೊಡುತ್ತೇವೆ. ರಾಜ್ಯದಲ್ಲಿ ಕೋಆಪರೇಟಿವ್ ಸಂಘಗಳ ಮೂಲಕ ಮಹಿಳೆಯರು ಮಾಡಿರುವ ಸಾಲವನ್ನು ಮನ್ನಾ ಮಾಡುವ ತೀರ್ಮಾನವನ್ನು ನಾವು ಅಧಿಕಾರಕ್ಕೆ ಬಂದ ಮೇಲೆ ಮಾಡುತ್ತೇವೆ. ಇವುಗಳ ಜೊತೆಗೆ 200 ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ಹಣ ನೀಡುತ್ತೇವೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಶೋಷಿತ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಕೊಡುವ ಕೆಲಸ ಮಾಡಿದ್ದೇನೆ. ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆ ಜಾರಿ ಮಾಡಿದ್ದು, ಬಡ್ತಿ ಮೀಸಲಾತಿ ಜಾರಿಗೆ ತಂದದ್ದು, ಸರ್ಕಾರಿ ಟೆಂಡರ್ ಗಳಲ್ಲಿ ಮೀಸಲಾತಿ ನೀಡಿದ್ದು, ಕೈಗಾರಿಕೋದ್ಯಮಗಳಿಗೆ 4% ಬಡ್ಡಿದರದಲ್ಲಿ ಬ್ಯಾಂಕುಗಳ ಮೂಲಕ ಸಾಲ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ನಾವು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 10,000 ಕೋಟಿ ರೂ. ಅನುದಾನ ನೀಡುವ ಕೆಲಸ ಮಾಡುತ್ತೇವೆ.
ಬೆಲೆಯೇರಿಕೆಯಿಂದ ಜನ ಜೀವನ ನಡೆಸಲು ಕಷ್ಟ ಆಗಿರುವುದರಿಂದ ನಾವು ತಿಂಗಳಿಗೆ 2000 ರೂ. ನೀಡುವ ಯೋಜನೆ ಜಾರಿ ಮಾಡುತ್ತಿದ್ದೇವೆ. ಇನ್ನೂ ಅನೇಕ ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ, ನಮ್ಮ ಈ ಎಲ್ಲಾ ಜನಪರ ಕಾರ್ಯಕ್ಕೆ ತಾವು ಬೆಂಬಲ ನೀಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ.
ಹೈಕಮಾಂಡ್ ನವರು ಒಪ್ಪಿದರೆ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ. ಇದನ್ನು ಕಳೆದ ಬಾರಿ ಕೋಲಾರಕ್ಕೆ ಬಂದಾಗಲೂ ಹೇಳಿದ್ದೆ.