ರಾಮನಗರ: ನಾನು ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ್ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಕ್ರೆಡಿಟ್‌ವಾರ್ ಬಗ್ಗೆ ಪ್ರತಿಕ್ರಯಿಸಿದರು. ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯನ್ನು ರಚನೆ ಮಾಡಿದ್ದಾರೆ. ಅವರು ಅಭಿವೃಧ್ದಿ ಮಾಡಿದ್ದೇನೆ ಎನ್ನುವುದು ತಪ್ಪೇನು ಅಲ್ಲ. ಆದರೆ ಡಾ.ಸಿ.ಎನ್.ಅಶ್ವಥನಾರಾಯಣ ಅವರು, ಕ್ಲೀನ್ ಮಾಡಿಸುತ್ತೇನೆ ಅಂತ ಹೇಳಿದ್ದರು, ಮಾಡಿದ್ರಾ? ವೃಷಭಾವತಿ ನದಿ ನೋಡಿದ್ದಾರಾ? ಎಂದು ಕುಟುಕಿದರು. ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಸಾಕಷ್ಟು ಅಭಿವೃದ್ದಿ ಮಾಡಿರುವುದಾಗಿ ತಿಳಿಸಿದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಈಗಾಗಲೆ ಹೆದ್ದಾರಿಯಲ್ಲಿ 80ಮಂದಿ ಸತ್ತಿದ್ದಾರೆ. ಸರ್ವಿಸ್ ರಸ್ತೆ ಪೂರ್ಣ ಮಾಡಲಿ, ಮೂಲ ಸೌಕರ್ಯಗಳನ್ನು ಒದಗಿಸಲಿ ಎಂದರು. ಪ್ರಧಾನಿ ಮೋದಿಯ ರಾಜ್ಯ ಪ್ರವಾಸದ ವಿಚಾರದಲ್ಲಿಯೂ ಟೀಕಾ ಪ್ರಹಾರ ನಡೆಸಿದ ಡಿ.ಕೆ.ಶಿವಕುಮಾರ್, ಚುನಾವಣೆ ಸಂದರ್ಭದಲ್ಲಿ ಬರುತ್ತಿದ್ದಾರೆ. ಕೊರೋನಾ ವೇಳೆ ಜನ ಸತ್ತಾಗ ಬರಲಿಲ್ಲ. ಈಗ ಬರ್‍ತಿದ್ದಾರೆ ಎಂದು ಟೀಕಿಸಿದರು.
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.