ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿನ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಿ ನಂತರ ಟೋಲ್‌ಗಳಲ್ಲಿ ಶುಲ್ಕ ಸಂಗ್ರಹ ಮಾಡುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೆಜ್ಜಾಲದ ಟೋಲ್ ಪ್ಲಾಜಾ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬಿಡದಿ ಹೋಬಳಿಯ ಹೆಜ್ಜಾಲ(ಕಣಿಮಿಣಕೆ)ಪ್ಲಾಜಾ ಬಳಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಸು.ಚಿ.ನೀಲೇಶ್‌ಗೌಡ ಹಾಗೂ ಕನ್ನಡ ಚಳುವಳಿ ಹೋರಾಟಗಾರ ವಿ.ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ನಾನಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಮಾಯಿಸಿ ಬಿಜೆಪಿ ಸರಕಾರ ಹಾಗೂ ಹೈವೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಸು.ಚಿ.ನೀಲೇಶ್‌ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಸುಗಮ ಸಂಚಾರಕ್ಕಾಗಿ ಬೆಂಗಳೂರು-ಮೈಸೂರು ಮಹಾನಗರಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವುದು ಹಾಗೂ ಟ್ರಾಫಿಕ್ ಸಮಸ್ಯೆ ನಿಯಂತ್ರಿಸುವ ಸಲುವಾಗಿ ದಶಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿಯಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯವನ್ನು ಸಹ ಕಲ್ಪಿಸುವುದು ಸಹ ಪ್ರಾಧಿಕಾರದ ಕರ್ತವ್ಯವಾಗಿದೆ. ಆದರೆ ಸರ್ವಿಸ್ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸದೆ ಎಕ್ಸ್‌ಪ್ರೆಸ್ ಹೈವೆಯನ್ನು ಉದ್ಘಾಟನೆ ಮಾಡುವುದು ಸರಿಯಲ್ಲ ಎಂದರು.
ಬೆಂಗಳೂರು- ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಅಲ್ಲಲ್ಲಿ ಜಾಗ ಖಾಲಿ ಬಿಡಲಾಗಿದೆ. ಹಾಗಾಗಿ ಕೆಲವು ಕಡೆ ಸರ್ವಿಸ್ ರಸ್ತೆಯಲ್ಲಿ ಓಡಾಡುವ ವಾಹನಗಳು ಎಕ್ಸ್‌ಪ್ರೆಸ್ ಹೈವೆಗೆ ಸಂಪರ್ಕ ಪಡೆದುಕೊಂಡು ಸಾಗಬೇಕಿದೆ. ಹೆದ್ದಾರಿಯಲ್ಲಿ ಬೈಕ್ ಮತ್ತು ಲಘು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ದಶಪಥ ಹೆದ್ದಾರಿಯ ಕಣಮಿಣಿಕಿ ಗ್ರಾಮ, ಹೆಜ್ಜಾಲ, ಕೇತಗಾನಹಳ್ಳಿ ಹಾಗೂ ಕಾಡುಮನೆ ಸರ್ಕಲ್ ಮತ್ತಿತರ ಕಡೆ ಸರ್ವಿಸ್ ರಸ್ತೆ ಸಂಪರ್ಕವೇ ಇಲ್ಲ. ಹಾಗಾದರೆ ಈ ಲಘು ವಾಹನಗಳು ಎಲ್ಲಿ ಓಡಾಡಬೇಕು ಎಂದು ಪ್ರಶ್ನಿಸಿದರು.
ಕನ್ನಡಪರ ಹೋರಾಟಗಾರ ವಿ.ನರಸಿಂಹಮೂರ್ತಿ ಮಾತನಾಡಿ, ದಶಪಥ ಹೆದ್ದಾರಿ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಬಸ್ ತಂಗುದಾಣಗಳನ್ನು ಸ್ಥಾಪಿಸಿಲ್ಲ. ಪ್ರಯಾಣಿಕರಿಗೆ ಆಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೆದ್ದಾರಿ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಹೋಟೆಲ್ ಮತ್ತು ವಿಶ್ರಾಂತಿ ಗೃಹ ನಿರ್ಮಿಸಿಲ್ಲ. ಈ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿ ತದನಂತರ ಶುಲ್ಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಎಕ್ಸ್‌ಪ್ರೆಸ್ ಹೈವೆಗೆ ಶುಲ್ಕ ಸಂಗ್ರಹಣೆ ತಪ್ಪಲ್ಲ. ಆದರೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ನಂತರ ಪಡೆಯಲಿ. ಸ್ಥಳೀಯರು ಓಡಾಡಲು ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲಿ. ಹೆದ್ದಾರಿಗೆ ರೈತರಿಂದ ಭೂಮಿ ಸ್ವಾಧಿನಪಡಿಸಿಕೊಂಡು ಈಗ ಅವರಿಗೆ ರಸ್ತೆ ಸೌಲಭ್ಯ ಕೊಡದೆ ಹಣ ವಸೂಲು ಮಾಡುವುದು ಎಷ್ಟು ಸರಿ ಎಂದರು. ಮಾರ್ಚ್ 12 ರಿಂದ ಟೋಲ್ ಸಂಗ್ರಹ ಮಾಡುವುದನ್ನು ಕೈಬಿಡಬೇಕು. ಸರಕಾರ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ತಪ್ಪಿದರೆ 100ಕ್ಕೂ ಹೆಚ್ಚು ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ರಮೇಶ್‌ಗೌಡ, ಕರುನಾಡ ಸೇವಕರು ಸಂಘಟನೆಯ ಲೋಕೇಶ್‌ಗೌಡ, ಕನ್ನಡಪರ ಹೋರಾಟಗಾರರಾದ ಕೆನಲಿಗೌಡ, ಕನ್ನಡ ಪ್ರಕಾಶ್, ಪುಟ್ಟೇಗೌಡ, ಶಿವರಾಜ್‌ಗೌಡ, ಸುನೀಲ್, ಕೆ.ಸಿ.ಮೂರ್ತಿ, ನಿಂಗರಾಜ್‌ಗೌಡ, ನಾಗರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.