ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ಟೋಲ್ ಸಂಗ್ರಹದ ವಿಚಾರದಲ್ಲಿ ನಮ್ಮದೇನೂ ತಕರಾರಿಲ್ಲ. ಪ್ರಯಾಣಿಕರಿಗೆ ಮತ್ತು ಸ್ಥಳೀಯರಿಗೆ ಎಲ್ಲಾ ರೀತಿಯ ಮೂಲಕ ಸೌಕರ್ಯಗಳನ್ನು ಒದಗಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ದಶಪಥ ಹೆದ್ದಾರಿ ಟೋಲ್ ಸಂಗ್ರಹದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸರಿಯಾದ ವ್ಯವಸ್ಥೆ ಕಲ್ಪಿಸಿ ನಂತರ ಟೋಲ್ ವಸೂಲಿ ಮಾಡಲಿ. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿದ ಕಾರಣಕ್ಕೆ ಅವರನ್ನು ಅರೆಸ್ಟ್ ಮಾಡಿದ್ದಾರೆ. ನಾನೂ ಸಹ ಶುಲ್ಕ ಪಾವತಿಸಿ ರಸೀದಿ ಪಡೆದುಕೊಂಡಿದ್ದೇನೆ ಎಂದರು.
ರಾಮನಗರ ಬೆಂಗಳೂರಿನ ವಿಧಾನಸೌಧ ಕಟ್ಟಿದ ಜಿಲ್ಲೆಯಾಗಿದೆ. ಇದು ಹೆಸರಿಗೆ ರಾಮನಗರ ಅಷ್ಟೇ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರಿಡಬೇಕಿತ್ತು. ಇನ್ನೆರಡು ವರ್ಷಗಳಲ್ಲಿ ರಾಮನಗರ ಜಿಲ್ಲೆ ಬಹಳ ಎತ್ತರಕ್ಕೆ ಹೋಗದಿದ್ದರೇ ನನ್ನ ಹೆಸರು ಡಿ.ಕೆ.ಶಿವಕುಮಾರ್ ಅಂತ ಕರಿಯೋದು ಬೇಡ ಎಂದು ಸವಾಲು ಹಾಕಿದರು.
ಬಿಜೆಪಿಯವರು ರಾಮಮಂದಿರ ಕಟ್ಟುತ್ತಾರಂತೆ. ರಾಮನ ಭಂಟ ಹನುಮಂತನ ದೇವಾಲಯ ದಾರಿಯುದ್ದಕ್ಕೂ ಜನರು ನಿರ್ಮಾಣ ಮಾಡಿದ್ದಾರೆ. ರಾಮನ ಹೆಸರು ಹಿಡಿದು ಮತ ಕೇಳಲು ಹೊರಟಿದ್ದಾರೆ. ಯಾರು ಏನೇ ಮಾಡಿದರೂ ರಾಮನಗರದಲ್ಲಿ ಬಿಜೆಪಿ ಆಟ ನಡೆಯುವುದಿಲ್ಲ ಎಂದು ಡಿಕೆಶಿ ಹೇಳಿದರು.