ರಾಮನಗರ: ತಾಲ್ಲೂಕಿನ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಅವಸರದಮ್ಮ(ಪಾರ್ವತಿದೇವಿ) ಜಾತ್ರೆ ಹಾಗೂ ಬಸವೇಶ್ವರಸ್ವಾಮಿ ಅಗ್ನಿಕೊಂಡ ಮಹೋತ್ಸವವು ಸಾವಿರಾರು ಭಕ್ತರ ಆರಾಧನೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಬಿಡದಿ ಹೋಬಳಿ ತಾಳಕುಪ್ಪೆ, ಚಿನ್ನೇಗೌಡನದೊಡ್ಡಿ ಗ್ರಾಮದ ಬಳಿ ಭಕ್ತರ ಸಂರಕ್ಷಣಾರ್ಥವಾಗಿ ನೆಲೆಸಿರುವ ಶ್ರೀ ಅವಸರದಮ್ಮ(ಪಾರ್ವತಿದೇವಿ) ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರದಲ್ಲಿರುವ ಬಸವೇಶ್ವರಸ್ವಾಮಿ ಹಾಗೂ ಮುತ್ತರಾಯಸ್ವಾಮಿ ದೇವರುಗಳ ಪೂಜೆ ಹಾಗೂ ಮೆರವಣಿಗೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀ ಬಸವೇಶ್ವರಸ್ವಾಮಿ ಅಗ್ನಿಕೊಂಡ ನೆಡೆಯಿತು. ದೇವಾಲಯದ ಅರ್ಚಕ ಬಸವರಾಜು ಅವರು ಭಕ್ತಾಧಿಗಳ ಹರ್ಷೋದ್ಘಾರದೊಂದಿಗೆ ಅಗ್ನಿಕೊಂಡ ಪ್ರವೇಶವನ್ನು ಯಶಸ್ವಿಯಾಗಿ ಪೂರೈಸಿದರು.
ನಾಲ್ಕು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಯುಕ್ತ ಏಪ್ರಿಲ್ 1ರ ಶನಿವಾರ ಸಂಜೆ ಶ್ರೀ ಮುತ್ತುರಾಯಸ್ವಾಮಿ ದೇವರ ಅನ್ನಸಂತರ್ಪಣೆಯೊಂದಿಗೆ ಅಗ್ನಿಕೊಂಡ ತೆಗೆಯುವ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಏಪ್ರಿಲ್ 2ರ ಭಾನುವಾರ ಸಂಜೆ ಅವಸರದಮ್ಮ ದೇವಾಲಯದಲ್ಲಿ ಹೋಮ, ಅಭಿಷೇಕ, ಕಳಸ ಸ್ಥಾಪನೆ ಹಾಗೂ ದೇವಿಗೆ ವಿಶೇಷ ಅಲಂಕಾರ ಕೈಂಕರ್ಯಗಳು ಜರುಗಿದವು. ಸೋಮವಾರ ಮುಂಜಾನೆ ಸುತ್ತಮುತ್ತಲಿನ ಗ್ರಾಮಸ್ಥರು ಕುರ್ಜಿನ ಆರತಿಗಳನ್ನು ತಂದು ಪೂಜೆ ಸಲ್ಲಿಸಿದರು. ಬೆಳಿಗ್ಗೆ 8.30 ಗಂಟೆಗೆ ನಡೆದ ಅಗ್ನಿಕೊಂಡ ಪ್ರವೇಶವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಬಿದಿರಿನಿಂದ ತಯಾರಿಸಿದ ಬುಟ್ಟಿಯಲ್ಲಿ ನಾನಾ ಪುಷ್ಪಗಳು ಹಾಗೂ ಹೊಂಬಾಳೆಯಿಂದ ಆಕರ್ಷಕವಾಗಿ ಅಲಂಕರಿಸಿದ ಕುರ್ಜಿನ ಆರತಿಗಳನ್ನು ಮಹಿಳೆಯರಾಧಿಯಾಗಿ ಭಕ್ತರು ಹೊತ್ತು ತಂದು ಶ್ರೀದೇವಿಗೆ ಪೂಜೆ ಅರ್ಪಿಸಿದರು. ದೇಗುಲದ ಮುಂಭಾಗದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಶ್ರೀ ಬಸವೇಶ್ವರಸ್ವಾಮಿ, ಅವಸರದಮ್ಮ ಮತ್ತು ಮುತ್ತುರಾಯಸ್ವಾಮಿ ದೇವರುಗಳ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ತಮಟೆ ವಾದ್ಯ ಮತ್ತು ಕುರ್ಜಿನ ಆರತಿಗಳೊಂದಿಗೆ ದೇವರುಗಳ ಮೂರ್ತಿಯನ್ನು ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮಧ್ಯಾಹ್ನ 1 ಗಂಟೆಯಿಂದ ಹರಕೆ ಹೊತ್ತ ಭಕ್ತಾಧಿಗಳಿಗೆ ಮುಡಿ ತಗೆಯುವ ಕಾರ್ಯ ನಡೆಯಿತು.3 ಗಂಟೆಗೆ ಬಾಯಿ ಬೀಗ, ರಥೋತ್ಸವ(ತೇರು) ಮೆರವಣಿಗೆಯು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ಭಕ್ತಾಧಿಗಳಿಗೆ ಮುಂಜಾನೆಯಿಂದಲೇ ಅಕ್ಕಪಕ್ಕದ ಗ್ರಾಮಗಳ ಮುಖಂಡರು ಪಾನಕ, ನೀರು ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗವನ್ನು ಏರ್ಪಡಿಸಿದ್ದರು. ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ಭಕ್ತರು ಸುಮಾರು ೩೦ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವವನ್ನು ಸಮರ್ಪಿಸಿದರು.
ಶ್ರೀ ಅವಸರದಮ್ಮ ದೇವಿಯ ಹಬ್ಬದಾಚರಣೆಯನ್ನು ಕೆಲವು ಕಟ್ಟನಿಟ್ಟಿನ ಶಿಸ್ತುಪಾಲನೆಯಿಂದ ಮಾಡಬೇಕಿದೆ. ಕುರ್ಜಿನ ಆರತಿಗಳನ್ನು ಮಡಿವಂತಿಕೆ ಮತ್ತು ಅತ್ಯಂತ ಪರಿಶುದ್ಧತೆಯಲ್ಲಿ ಹೊತ್ತು ಸಾಗುವ ಸಂಪ್ರದಾಯವಿದೆ. ಸುತ್ತಮುತ್ತಲ ೩೩ ಹಳ್ಳಿಗಳ ಗ್ರಾಮಸ್ಥರು ಸೇರಿ ೪ ದಿನಗಳ ಕಾಲ ಬಹಳ ಶ್ರದ್ಧೆಯಿಂದ ದೊಡ್ಡ ಹಬ್ಬವನ್ನಾಗಿ ಆಚರಣೆ ಮಾಡುತ್ತಾರೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಶಕ್ತಿದೇವತೆ ಹಬ್ಬದಲ್ಲಿ ಸಾವಿರಾರು ಜನ ಭಕ್ತರು, ನೆಂಟರಿಷ್ಟರು ಪಾಲ್ಗೊಂಡು ಸಂಭ್ರಮಿಸುವುದು ಪ್ರತೀತಿಯಾಗಿದೆ.
ಏಪ್ರಿಲ್ 4ರ ಮಂಗಳವಾರ ಮಧ್ಯಾಹ್ನ ಅವರಸದಮ್ಮ ದೇವಿಯ ಉತ್ಸವ ಮೂರ್ತಿಯನ್ನು ತಾಳಕುಪ್ಪೆ ಮತ್ತು ಚಿನ್ನೇಗೌಡನದೊಡ್ಡಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ರಾತ್ರಿ 10ಗಂಟೆಗೆ ನಡೆಯುವ ಅಮ್ಮನವರ ಮರುಪೂಜೆಯ ಮುಖೇನ 4ದಿನಗಳ ಹಬ್ಬದಾಚರಣೆ ಹಾಗೂ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.