ತುಮಕೂರು: ಕರ್ನಾಟಕದಲ್ಲಿ ಜನವಿರೋಧಿ, ಕಡು ಭ್ರಷ್ಟ, ಅಭಿವೃದ್ಧಿ ವಿರೋಧಿ ಬಿಜೆಪಿ ಸರ್ಕಾರವಿದೆ, ಕಳೆದ ೫೦ ವರ್ಷಗಳಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ಜನರು ಕಂಡಿರಲಿಲ್ಲ, ೪೦ ಪರ್ಸೆಂಟ್ ಕಮೀಷನ್ ಬಗ್ಗೆ ರಾಜ್ಯದ ಜನರು ಬೀದಿ ಬೀದಿಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ, ಜನರ ಕೆಲಸ ದೇವರ ಕೆಲಸ ಎನ್ನುವುದನ್ನು ಬಿಜೆಪಿ ಮರೆತು ರಾಜ್ಯಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಈಗಾಗಲೇ ೫ ಗ್ಯಾರೆಂಟಿಗಳನ್ನು ರಾಜ್ಯದ ಜನರಿಗೆ ನೀಡಿದ್ದು, ಗ್ಯಾರೆಂಟಿ ಕಾರ್ಡ್‌ಗಳನ್ನು ಮನೆಮನೆಗೆ ತಲುಪಿಸಿದ್ದೇವೆ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಅವರು ಉತ್ತಮ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಪಕ್ಷದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕೊರಟಗೆರೆಯಲ್ಲಿ ಪರಮೇಶ್ವರ್ ಗೆದ್ದರೆ ನಾನೇ ಗೆದ್ದಂತೆ ಎನ್ನುವುದನ್ನು ಅರಿತು ಮತದಾರರು ಪರಮೇಶ್ವರ್‍ಗೆ ಮತ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದ ಅವರು, ನಾನು ರಾಜೀವ್ ಭವನ ಉದ್ಘಾಟನೆಗೆ ಬರದೇ ಇದ್ದಿದ್ದನ್ನೆ ಅಪಪ್ರಚಾರ ಮಾಡಿದ್ದಾರೆ, ೨೦೧೩ರಲ್ಲಿ ಇದೇ ರೀತಿ ಅಪಪ್ರಚಾರ ಮಾಡಿದ್ದರು, ನನ್ನ ಮತ್ತು ಪರಮೇಶ್ವರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಮೇಶ್ವರ್ ನಾನು ೮ ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕೆಲಸ ಮಾಡಿ, ೨೦೧೩ರಲ್ಲಿ ಸೋತ ನಂತರ ವಿಧಾನ ಪರಿಷತ್ ಸದಸ್ಯನಾಗಿ ಮಾಡಿ ಗೃಹ ಸಚಿವರನ್ನಾಗಿ ಜೊತೆಯಲ್ಲಿ ಕೆಲಸ ಮಾಡಿದ್ದರೂ ಸಹ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ರಾಜಕೀಯ ವಿರೋಧಿಗಳು ಪರಮೇಶ್ವರ್ ಅವರಿಗೆ ಕಲ್ಲೆಸೆದಿದ್ದಾರೆ, ಸೋಲುವ ಹತಾಶೆ ಅವರಿಗೆ ಕಾಡುತ್ತಿದೆ, ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರು ಗೆಲ್ಲುವುದು ನಿಶ್ಚಿತ, ಪರಮೇಶ್ವರ್ ಗೆದ್ದರೆ ರಾಜ್ಯದ ಶೋಷಿತ ವರ್ಗಗಳ ಅದೃಷ್ಟ, ಪರಮೇಶ್ವರ್ ಗೆಲ್ಲುವುದು ಗ್ಯಾರೆಂಟಿ, ಪರಮೇಶ್ವರ್ ಗೆದ್ದರೆ ನನಗೆ ಸಂತೋಷವಾಗಲಿದೆ ಎಂದರು.
ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಬೇಕಿರುವುದು ರಾಜ್ಯದ ೭ ಕೋಟಿ ಜನರ ಆಶಯವಾಗಿದೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ, ರಾಜ್ಯದ ಜನರು ತಲೆ ತಗ್ಗಿಸುವಂತೆ ರಾಜ್ಯಭಾರ ಮಾಡುತ್ತಿರುವ ಬಿಜೆಪಿಯನ್ನು ತೊಲಗಿಸಿ ರಾಜ್ಯವನ್ನು ಉಳಿಸಲು ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು.
ಸ್ವಾತಂತ್ರ ಬಂದಾಗಿನಿಂದ ನಾನು ಮುಖ್ಯಮಂತ್ರಿ ಹುದ್ದೆ ಬಿಡುವವರೆಗೆ ರಾಜ್ಯದ ಸಾಲ ೨.೭೦ ಲಕ್ಷ ಕೋಟಿ, ಆದರೆ ಈಗ ೫.೬೪ ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ, ಕೇವಲ ಮೂರು ವರ್ಷದಲ್ಲಿ ೩ ಲಕ್ಷ ಕೋಟಿ ಸಾಲ ಮಾಡಿ, ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ, ಯೋಜನಾ ಬದ್ಧ ವೆಚ್ಚ ೧೦೩ರಷ್ಟಿದೆ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೧೫ ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ, ಬಿಜೆಪಿ ಸರ್ಕಾರ ಒಂದು ಮನೆಯನ್ನು ನೀಡಿಲ್ಲ ಎಂದರು.
ಬಿಜೆಪಿ ಲಂಚ ಹೊಡೆಯುವುದನ್ನು ಕಡಿಮೆ ಮಾಡಿದ್ದರೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ಕಡಿಮೆ ಮಾಡುವ ಅಗತ್ಯ ಬರುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರಲಿದೆ, ಬಡವರಿಗೆ ೧೦ ಕೆಜಿ ಅಕ್ಕಿಯನ್ನು ಕೊಡುತ್ತೇವೆ, ರೈತರ ಸಾಲಮನ್ನಾ ಮಾಡಲು ಆಗದ ಬಿಜೆಪಿ ಉದ್ಯಮಿಗಳ ೧೨ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ, ಶ್ರೀಮಂತರ ಪರ ಇರುವ ಬಿಜೆಪಿ, ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗಲಿದೆ ಎನ್ನುವ ಮನೋಭಾವನೆ ಇರುವವರಿಗೆ ಅಧಿಕಾರ ಕೊಡಬೇಕೆ ಎಂದು ಪ್ರಶ್ನಿಸಿದರು.
ಮೋದಿ ಚುನಾವಣೆಗಾಗಿ ಬರುತ್ತಿದ್ದಾರೆ, ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಮುಖ ನೋಡಿ ಜನರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಿದೆ, ಮೋದಿ ನೂರು ಬಾರಿ ಬಂದರೂ ಬಿಜೆಪಿಯ ಭ್ರಷ್ಟ್ರತೆಯನ್ನು ಮುಚ್ಚಲು ಆಗುವುದಿಲ್ಲ, ರಾಜ್ಯದ ಜನರು ಪ್ರಬುದ್ಧರಿದ್ದಾರೆ, ಅಚ್ಛೇದಿನ್ ಬರುತ್ತದೆ ಎಂದರು ಬಂತಾ ಎಂದು ಪ್ರಶ್ನಿಸಿದರು.