ಬೀದರ್: ಬ್ರಿಟನ್‌ನಲ್ಲಿರುವ ಲಂಡನ್ ಸಿಟಿ ವಿವಿಯ ಬೇಯಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಬೀದರ್ ಮೂಲದ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್(ಎಂ.ಎಸ್.) ವಿದ್ಯಾರ್ಥಿಯೊಬ್ಬ ಕನ್ನಡ ಧ್ವಜ ಹಿಡಿದು ಪದವಿ ಸ್ವೀಕರಿಸಿದ ಪ್ರಸಂಗ ನಡೆದಿದ್ದು, ಈ ಕುರಿತ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಆದೀಶ ರಜನೀಶ ವಾಲಿ ಕನ್ನಡ ಪ್ರೇಮ ಮೆರೆದ ವಿದ್ಯಾರ್ಥಿಯಾಗಿದ್ದು, ಈತನ ಕನ್ನಡ ಪ್ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ಅಜ್ಜ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಖ್ಯಾತ ಉದ್ಯಮಿ ಹಾಗೂ ಪತ್ರಕರ್ತ ತಂದೆ ಡಾ.ರಜನೀಶ ವಾಲಿ ಮತ್ತು ತಾಯಿ ಅಂಜನಾ ವಾಲಿ ಅವರೇ ಈತ ಬಾಲ್ಯದಿಂದಲೂ ಕನ್ನಡಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆ. ಈ ಹಿಂದೆಯೂ ಅನೇಕ ಬಾರಿ ಆದೀಶ ವಾಲಿ ಇದೇ ರೀತಿ ಕನ್ನಡಪ್ರೇಮ ಪ್ರಕಟಿಸಿ ಗಮನ ಸೆಳೆದಿದ್ದ.
ಬ್ರಿಟಿಷರ ನಾಡಲ್ಲಿ ಕನ್ನಡ ಡಿಂಡಿಮ ಬಾರಿಸುವ ಮೂಲಕ ಕನ್ನಡದ ಗರಿಮೆ ಹೆಚ್ಚಿಸುವುದು ನನ್ನ ಮಹದಾಸೆಯಾಗಿತ್ತು ಎಂದಿರುವ ಆದೀಶ, ತನ್ನ ಈ ಪದವಿಯನ್ನು ಇಡೀ ಕರ್ನಾಟಕ, ಕನ್ನಡಿಗರು ಹಾಗೂ ಕನ್ನಡಕ್ಕೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾನೆ.