News Kannada
Wednesday, March 22 2023

ಬೀದರ್

ಬೀದರ್: ‘ಕ್ರಾಂತಿ ಸೂರ್ಯ’ ನ ಕ್ರಾಂತಿಯ ಮೇಲೆ ಬೆಳಕು

The light on the revolution of the 'revolutionary sun'
Photo Credit : News Kannada

ಬೀದರ್: ಮನೆಯಲ್ಲಿ ಕುಳಿತು ಅಂಗೈಯಲ್ಲೇ ನಾಟಕ ನೋಡುವ ಇಂದಿನ ದಿನಗಳಲ್ಲಿ ದೊಡ್ಡ ಮಟ್ಟದ ನಾಟಕಗಳಿಗೆ ಇಂದಿಗೂ ಜನ ಬರುತ್ತಾರೆ ಎನ್ನುವುದಕ್ಕೆ ನಗರದಲ್ಲಿ ನಡೆದ ‘ಕ್ರಾಂತಿ ಸೂರ್ಯ ಮಹಾನಾಟಕ’ ಸಾಕ್ಷ್ಯ ಒದಗಿಸಿತು. ರಾತ್ರಿ 9 ಗಂಟೆಗೆ ಆರಂಭವಾದ ನಾಟಕವು ಮಧ್ಯರಾತ್ರಿಯ ವರೆಗೂ ಪ್ರದರ್ಶನಗೊಂಡರೂ ಪ್ರೇಕ್ಷಕರು ಅತ್ತಿತ್ತ ಕದಲದಂತೆ ಕುತೂಹಲದಿಂದ ವೀಕ್ಷಿಸಿ ಕಲಾವಿದರನ್ನು ಬೆಂಬಲಿಸಿದರು.

ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ‘ಕ್ರಾಂತಿ ಸೂರ್ಯ’ ಮಹಾನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕಿತು.

150 ಅಡಿ ಉದ್ದ X200 ಅಡಿ ಅಗಲದ ವೇದಿಕೆಯಲ್ಲೇ ಮೂರು ಅಂತಸ್ತಿನ ವೇದಿಕೆ ನಿರ್ಮಿಸಲಾಗಿತ್ತು. ಪ್ರಧಾನ ವೇದಿಕೆಯ ಜತೆ ಎಡ ಹಾಗೂ ಬಲ ಬದಿಯ ವೇದಿಕೆಗಳಲ್ಲೂ ಸಾಂದರ್ಭಿಕ ಪ್ರದರ್ಶನ ನಡೆಯಿತು. ಮೂರು ತಾಸಿನ ಸಂಗೀತ ಹಾಗೂ ಧ್ವನಿಮುದ್ರಿತ ನಾಟಕದಲ್ಲಿ 150 ಕಲಾವಿದರು ತಮ್ಮ ಪ್ರತಿಭೆಯನ್ನು ಮೆರೆದರು.

‘ನಾಟಕದ ತಂಡದಲ್ಲಿ 50 ಟೆಕ್ನಿಷಿಯನ್‌ಗಳು, 10 ಬಾಲಕ, ಬಾಲಕಿಯರು ಸೇರಿ ಒಟ್ಟು 150 ಕಲಾವಿದರು ಇದ್ದಾರೆ. ಮಂಟಪದ ಸಾಮಗ್ರಿಗಳನ್ನು ನಾಲ್ಕು ಲಾರಿಗಳಲ್ಲಿ ತಂದು ವೇದಿಕೆ ನಿರ್ಮಿಸಲಾಗಿದೆ. ಧ್ವನಿ ಬೆಳಕಿನ ವ್ಯವಸ್ಥೆಗೆ ವೇದಿಕೆ ಮುಂಭಾಗದಲ್ಲಿ ಕಂಬಗಳನ್ನು ನಿರ್ಮಿಸಲಾಗಿದೆ. ನಮ್ಮ ಪ್ರಯತ್ನಕ್ಕೆ ಯಶ ದೊರಕಿದೆ. ನಾಟಕದ ಪ್ರದರ್ಶನದ ಮೊದಲು ಒಂದು ತಾಸು ಉದ್ಘಾಟನೆ ಕಾರ್ಯಕ್ರಮ ನಡೆದರೂ ಜನ ನಾಟಕ ವೀಕ್ಷಿಸಿ ಅನಂದಿಸಿದ್ದಾರೆ’ ಎಂದು ನಾಟಕದ ನಿರ್ದೇಶಕ ನಾಗಪುರದ ಜತಿನ್‌ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಟಕದಲ್ಲಿ ನೈಜತೆ ತುಂಬಲು ನಿಜವಾದ ಎತ್ತಿನ ಗಾಡಿ, ಇನ್ನಿತರ ಪರಿಕರಗಳನ್ನು ಬಳಸಲಾಗಿತ್ತು. ಬಾಬಾಸಾಹೇಬರು ಚಿಕ್ಕವರಿದ್ದಾಗ ಶಾಲೆಗೆ ಬರಿಗಾಲಲ್ಲೇ ಬಿಸಿಲಲ್ಲಿ ನಡೆದುಕೊಂಡೇ ಹೋಗುತ್ತಿದ್ದ ದೃಶ್ಯ, ಮದುವೆ ಮೆರವಣಿಗೆ, ರಮಾಬಾಯಿ ಅಂತ್ಯಸಂಸ್ಕಾರದ ದೃಶ್ಯಗಳನ್ನು ನಿಜವೆನ್ನುವಂತೆ ಬಿಂಬಿಸಲಾಯಿತು.

ನಾಗಪುರ ಮೂಲದ ಕಂಪನಿಯೇ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಬಿಂಬಿಸುವ ‘ಜಾನತಾ ರಾಜಾ’ ನಾಟಕವನ್ನು ಬೆಳಗಾವಿಯಲ್ಲಿ ಎರಡು ಬಾರಿ ಪ್ರದರ್ಶಿಸಿದೆ. ಇದು ಏಷ್ಯಾದ ಅತಿದೊಡ್ಡ ನಾಟಕವಾಗಿದೆ. ಈ ನಾಟಕದಲ್ಲಿ 1200 ಕಲಾವಿದರು ಇದ್ದಾರೆ. ನಾಟಕದ ಯುದ್ಧ ಸನ್ನಿವೇಶ ಬಂದಾಗ ಆನೆ, ಒಂಟೆ, ಕುದುರೆ ಬಳಸಲಾಗುತ್ತದೆ. ರಾಜನು ಸಂದೇಶ ಕಳಿಸಿದ ಸಂದರ್ಭದಲ್ಲಿ ಕುದರೆ ಪ್ರೇಕ್ಷರ ಮಧ್ಯದಲ್ಲಿಯೇ ಓಡಿ ಹೋಗುತ್ತದೆ. ರಾಣಿಯರನ್ನು ಪಲ್ಲಕ್ಕಿಯಲ್ಲಿ ಒಯ್ಯುವ, ಚಕ್ಕಡಿಯಲ್ಲಿ ಧಾನ್ಯ ಸಾಗಿರುವ ದೃಶ್ಯಗಳು ನಿಜರೂಪದಲ್ಲಿಯೇ ಇರುತ್ತವೆ. ಅದೇ ಮಾದರಿಯ ನಾಟಕ ಬೀದರ್‌ನಲ್ಲಿ ಪ್ರದರ್ಶಿತಗೊಂಡಿತು.

‘ದಕ್ಷಿಣ ಭಾರತದ ಅತಿದೊಡ್ಡ ನಾಟಕ ‘ರಮಾಯಿ’ ಕೋವಿಡ್‌ ಮುಂಚೆ ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಪ್ರದರ್ಶಿತಗೊಂಡಿತ್ತು. ಅದಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಇದೀಗ ಎರಡನೇ ಬಾರಿಗೆ ನಗರದಲ್ಲಿ ‘ಕ್ರಾಂತಿ ಸೂರ್ಯ’ ಪ್ರದರ್ಶಿತಗೊಂಡಿದೆ. ಬೀದರ್‌ನಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ದೊಡ್ಡ ದಂಡು ಇದೆ’ ಎಂದು ಜತಿನ್‌ ತಿಳಿಸಿದರು.

See also  ಔರಾದ: ಸಚಿವ ಪ್ರಭು ಚವ್ಹಾಣರಿಂದ 18 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

‘ಬೀದರ್‌ನಲ್ಲಿ ಇಂಥದೊಂದು ಐತಿಹಾಸಿಕ ನಾಟಕ ಪ್ರದರ್ಶನ ಮಾಡಬೇಕು ಎಂದು ಕಳೆದೊಂದು ವರ್ಷದಿಂದ ಪ್ರಯತ್ನ ನಡೆದಿತ್ತು. ಹಣಕಾಸಿನ ಪೂರ್ಣ ವ್ಯವಸ್ಥೆ ಆಗದ ಕಾರಣ ವಿಳಂಬವಾಗಿತ್ತು. ಕೊರತೆಯಾಗಿದ್ದ ಹಣವನ್ನು ಸೂರ್ಯಕಾಂತ ನಾಗಮಾರಪಳ್ಳಿ ಅವರು ಕೊಟ್ಟಿದ್ದಾರೆ. ಅವರಿಗೆ ಋಣಿಯಾಗಿದ್ದೇವೆ’ ಎಂದು ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು