ಔರಾದ: ರಾಜ್ಯದ ನಾಲ್ಕು ಕಡೆಗಳಲ್ಲಿ ಬೇಡ ಜಂಗಮ ಅಭ್ಯರ್ಥಿಗಳು 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದು, ಅವು ಪುರಸ್ಕೃತಗೊಂಡಿವೆ. ಆದರೆ ಔರಾದ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದ ಬೇಡಜಂಗಮ ಮುಖಂಡನಾದ ನನ್ನ ನಾಮಪತ್ರ ತಿರಸ್ಕರಿಸಿದ್ದು ಬಿಜೆಪಿ ಹುರಿಯಾಳು ಪ್ರಭು ಚವ್ಹಾಣ ಅವರು ದುರುದ್ದೇಶದಿಂದ ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡು ಸೋಲುವ ಹತಾಶ ಭಾವನೆಯಿಂದ ಇಂತಹ ಅಸಾಂವಿಧಾನಿಕ ಕಾರ್ಯಕ್ಕೆ ಕೈಹಾಕಿರುವ ಕ್ರಮ ಖಂಡನಾರ್ಹವಾಗಿದ್ದು, ಮುಂಬರುವ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಾಗುವುದು. ಆದ್ದುದರಿಂದ ನಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರು ಧೃತಿಗೆಡುವ ಅಗತ್ಯವಿಲ್ಲವೆಂದು ಏಕತಾ ಫೌಂಡೇಶನ್ ನಿಕಟಪೂರ್ವ ಅಧ್ಯಕ್ಷರಾದ ರವೀಂದ್ರ ಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಾನು ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಜನರ ಕಷ್ಟ-ಸುಖಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತ ಬಂದಿರುತ್ತೇನೆ. ಕೋವಿಡ್ ಕಾಲದಲ್ಲಿ ಕ್ಷೇತ್ರದಲ್ಲಿ ಆಹಾರ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆ ಉದ್ಭವಿಸದಂತೆ ಕ್ಷೇತ್ರದ ತುಂಬೆಲ್ಲ ಕಿಟ್ ವಿತರಿಸುವ ಮೂಲಕ ಜನರ ಧ್ವನಿಯಾಗಿ ನಿಂತಿರುವೆ. ಈಗಿನ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ಅವರು ಕಳೆದ ಹದಿನೈದು ವರ್ಷಗಳಿಂದ ಶಾಸಕರಾಗಿ ಮಂತ್ರಿಗಳಾಗಿ ಅಲ್ಲಿಯ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಲಿಲ್ಲವೆಂಬುದು ದುರ್ದೈವದ ಸಂಗತಿ. ನನ್ನ ಕಾರ್ಯ ಮೆಚ್ಚಿ ಜನರು ನನ್ನ ಕೈಹಿಡಿಯುತ್ತಾರೆಂಬ ಹತಾಶ ಭಾವನೆಯಿಂದ ಹಾಗೂ ಸೋಲಿನ ಭೀತಿಯಿಂದ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಜಿಲ್ಲಾಧಿಕಾರಿಗಳನ್ನು ಹಾಗೂ ಇನ್ನಿತರ ಕೆಲವು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು 2019ರಲ್ಲಿ ನ್ಯಾಯಯುತವಾಗಿ ಪಡೆದಿರುವ ನನ್ನ ಬೇಡಜಂಗಮ ಜಾತಿ ಪ್ರಮಾಣ ಪತ್ರವನ್ನು ಉದ್ದೇಶಪೂರ್ವಕವಾಗಿ ಚುನಾವಣೆ ಸಂದರ್ಭದಲ್ಲಿ ರದ್ದುಪಡಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇಂತಹ ದುರ್ನಡತೆಗೆ ತಕ್ಕ ಪಾಠ ಕಲಿಸಲು ನಾವು ಸದಾ ಸಿದ್ಧರಾಗಿದ್ದು, ನಮ್ಮ ಸಂಕಲ್ಪದಂತೆ ಪ್ರಭು ಚವ್ಹಾಣ ಅವರನ್ನು ಹೀನಾಯವಾಗಿ ಸೋಲಿಸಿ, ಪ್ರಭು ಚವ್ಹಾಣ ಮುಕ್ತ ಕ್ಷೇತ್ರವನ್ನಾಗಿಸಲು ಪಣ ತೊಡೋಣ. ನನ್ನ ನಾಮಪತ್ರ ತಿರಸ್ಕೃತವಾಗಿದೆ ಎಂದು ಯಾರೂ ಮನನೊಂದದೆ ಧೈರ್ಯವಾಗಿದ್ದು, ನಮ್ಮ ಸಂಕಲ್ಪ ಪೂರ್ಣಗೊಳಿಸೋಣ. ಕ್ಷೇತ್ರದಲ್ಲಿಯೇ ಉಳಿದು ನಿರಂತರವಾಗಿ ಜನಸೇವೆ ಮಾಡುತ್ತೇನೆ ಎಂದು ತಿಳಿಸಿರುತ್ತಾರೆ.
ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ಕಮಲನಗರ ತಾಲೂಕಿನ ನನ್ನ ಸ್ವಗ್ರಾಮ ಹಾಲಹಳ್ಳಿಯಲ್ಲಿ ಕಾರ್ಯಕರ್ತರ ಹಾಗೂ ಬೆಂಬಲಿಗರ ತುರ್ತು ಸಭೆ ಕರೆಯಲಾಗಿದ್ದು, ಮುಂಬರುವ ದಿನಗಳಲ್ಲಿ ಪ್ರಭು ಚವ್ಹಾಣ ಅವರನ್ನು ಸೋಲಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಈ ಮಹತ್ವದ ಸಭೆಗೆ ನಮ್ಮ ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ರವೀಂದ್ರ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.